ಚಾರ್ಧಾಮ ಯಾತ್ರೆ: 6 ದಿನದಲ್ಲಿ 16 ಮಂದಿ ಯಾತ್ರಿಕರು ಮೃತ್ಯು

(ಫೈಲ್ ಫೋಟೊ)
ಡೆಹ್ರಾಡೂನ್: ಪ್ರಸಕ್ತ ವರ್ಷದ ಚಾರ್ಧಾಮ ಯಾತ್ರೆ ಮೇ 3ರಂದು ಆರಂಭವಾಗಿದ್ದು, ಮೊದಲ ಆರು ದಿನಗಳಲ್ಲಿ ಹದಿನಾರು ಮಂದಿ ಯಾತ್ರಿಕರು ಜೀವ ಕಳೆದುಕೊಂಡಿದ್ದಾರೆ.
ಸುಮಾರು 10 ರಿಂದ 12 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ ಇರುವ ಈ ಪ್ರಸಿದ್ಧ ತೀರ್ಥಕ್ಷೇತ್ರಗಳಿಗೆ ತೆರಳುವ ಸಂದರ್ಭದಲ್ಲಿ ಉಂಟಾಗಿರುವ ಹೃದಯ ಸಂಬಂಧಿ ಸಮಸ್ಯೆಗಳಿಂದ ಬಹುತೇಕ ಸಾವುಗಳು ಸಂಭವಿಸಿವೆ. ಆತಂಕಕಾರಿ ಅಂಶವೆಂದರೆ ಕೋವಿಡ್-19 ಪೂರ್ವ ಕಾಲಘಟ್ಟದಂತೆ ಯಾತ್ರಾರ್ಥಿಗಳು ಈಗ ಆರೋಗ್ಯ ಪ್ರಮಾಣ ಪತ್ರವನ್ನು ಸಲ್ಲಿಸುವ ಅಗತ್ಯವಿಲ್ಲ ಹಾಗೂ ಪ್ರತಿದಿನ ಮಂದಿರಗಳಿಗೆ ಭೇಟಿ ನೀಡಬಹುದಾದ ಗರಿಷ್ಠ ಯಾತ್ರಾರ್ಥಿಗಳ ಸಂಖ್ಯೆಗೆ ಮಿತಿ ವಿಧಿಸಿಲ್ಲ.
ಯಾತ್ರಾರ್ಥಿಗಳ ಸಾವು ಸಂಭವಿಸುತ್ತಿರುವುದು ಭಿನ್ನ ಕಾರಣಗಳಿಂದ. "ಮಂದಿರಕ್ಕೆ ಭೇಟಿ ನೀಡಬಹುದಾದ ಯಾತ್ರಿಗಳ ಸಂಖ್ಯೆಗೆ ಮಿತಿ ವಿಧಿಸಿಲ್ಲ. ಆದ್ದರಿಂದ ಚೆಕ್ಪೋಸ್ಟ್ ನಲ್ಲಿ ಭಾರಿ ದಟ್ಟಣೆ ಇದೆ. ಜನ ಆರೋಗ್ಯ ತಪಾಸಣೆಗಳನ್ನು ತಪ್ಪಿಸಿಕೊಳ್ಳುತ್ತಿದ್ದಾರೆ ಹಾಗೂ ಕೆಲವರು ಯಾತ್ರೆ ಕೈಗೊಳ್ಳಲು ಅನರ್ಹರಾದರೂ, ಯಾವುದೇ ದುರಂತ ಸಂಭವಿಸಿದರೆ ತಾವೇ ಹೊಣೆಗಾರರು ಎಂದು ಮುಚ್ಚಳಿಕೆ ನೀಡಲೂ ಸಿದ್ಧರಿದ್ದಾರೆ" ಎಂದು ಉತ್ತರಕಾಶಿಯ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ಕೆ.ಎಸ್.ಚೌಹಾನ್ ಹೇಳಿದ್ದಾರೆ.
"ಚಾರ್ಧಾಮದ ನಾಲ್ಕೂ ಕಡೆಗಳಲ್ಲಿ ಅತ್ಯುತ್ತಮ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿದ್ದೇವೆ. ಯಾತ್ರಾರ್ಥಿಗಳು ಆರೋಗ್ಯ ಪ್ರಮಾಣಪತ್ರವನ್ನು ಹೊಂದಿರುವುದನ್ನು ಸದ್ಯದಲ್ಲೇ ಕಡ್ಡಾಯಪಡಿಸಲಿದ್ದೇವೆ" ಎಂದು ಆರೋಗ್ಯ ಸಚಿವ ಧನ್ಸಿಂಗ್ ರಾವತ್ ಸ್ಪಷ್ಟಪಡಿಸಿದ್ದಾರೆ.