ರೌಡಿಶೀಟರ್ ರಾಹುಲ್ ತಿಂಗಳಾಯ ಕೊಲೆ ಪ್ರಕರಣ; ವಿದ್ಯಾರ್ಥಿ ಸಹಿತ ಆರು ಮಂದಿ ಆರೋಪಿಗಳ ಬಂಧನ

ಮಂಗಳೂರು : ನಗರದ ಎಮ್ಮೆಕೆರೆ ಮೈದಾನದ ಬಳಿ ಎ.28ರಂದು ನಡೆದ ರೌಡಿಶೀಟರ್ ಹೊಯ್ಗೆಬಜಾರ್ ನಿವಾಸಿ ರಾಹುಲ್ ತಿಂಗಳಾಯ ಯಾನೆ ಕಕ್ಕೆ ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ಸಹಿತ 6 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಎಮ್ಮೆಕೆರೆ ನಿವಾಸಿಗಳಾದ ಮಹೇಂದ್ರ ಶೆಟ್ಟಿ (೨೭) ಮತ್ತು ಸುಶಿತ್ (೨೦) ಹಾಗೂ ವಿಷ್ಣು ಪಿ. (೨೦), ಬೋಳಾರ ನಿವಾಸಿಗಳಾದ ಅಕ್ಷಯ್ ಕುಮಾರ್ (೨೫) ಮತ್ತು ಶುಭಂ ಶೆಟ್ಟಿ (೨೬), ಮೊರ್ಗನ್ಸ್‌ಗೇಟ್ ನಿವಾಸಿ ದಿಲ್ಲೇಶ್ ಬಂಗೇರಾ (೨೧) ಬಂಧಿತ ಆರೋಪಿಗಳಾಗಿದ್ದಾರೆ.
ಎ.೨೮ರಂದು ಎಮ್ಮೆಕೆರೆಯಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ರಾಹುಲ್ ತನ್ನ ಸ್ನೇಹಿತನ ಜತೆ ತೆರಳಿದ್ದ. ಈ ಸಂದರ್ಭ ಮಹೇಂದ್ರ ಶೆಟ್ಟಿ, ಅಕ್ಷಯ್, ಸುಶಿತ್, ದಿಲ್ಲೇಶ್ ತಲವಾರು ಮತ್ತು ಕತ್ತಿಗಳಿಂದ ರಾಹುಲ್‌ಗೆ ಮಾರಣಾಂತಿಕವಾಗಿ ಹಲ್ಲೆಗೈದಿದ್ದರು. ಗಂಭೀರ ಗಾಯಗೊಂಡ ರಾಹುಲ್‌ನನ್ನು ಆಸ್ಪತ್ರೆಗೆ ಕರೆದೊಯ್ದರೂ ಕೂಡ ಯಾವುದೇ ಪ್ರಯೋಜನವಾಗಿರಲಿಲ್ಲ. ಮಹೇಂದ್ರ ಶೆಟ್ಟಿ, ಸುಶಿತ್, ಅಕ್ಷಯ್ ಕುಮಾರ್, ದಿಲ್ಲೇಶ್ ಈ ಕೊಲೆಯಲ್ಲಿ ನೇರ ಭಾಗಿಯಾಗಿದ್ದರೆ, ಶುಭಂ ಮತ್ತು ವಿಷ್ಣು ಒಳಸಂಚು ರೂಪಿಸಿದ್ದರು. ಆರೋಪಿಗಳನ್ನು ಸುರತ್ಕಲ್ ರೈಲ್ವೆ ಸ್ಟೇಷನ್ ಹಾಗೂ ಸುಲ್ತಾನ್ ಬತ್ತೇರಿ, ಸೋಮೇಶ್ವರ ಬೀಚ್ ಬಳಿಯಿಂದ ಬಂಧಿಸಲಾಗಿದೆ. ಆರೋಪಿಗಳಿಂದ ೩ ತಲವಾರು, ೪ ಕತ್ತಿ, ೩ಚೂರಿ, ಎರಡು ಸ್ಕೂಟರ್, ೧ ಬುಲೆಟ್ ಬೈಕ್ ಹಾಗೂ ೫ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
*ಹಳೇ ವೈಷಮ್ಯ ಕೊಲೆಗೆ ಕಾರಣ: ರಾಹುಲ್ ಮತ್ತು ಮಹೇಂದ್ರ ಶೆಟ್ಟಿ ಮಧ್ಯೆ ಹಳೇ ವೈಷಮ್ಯವಿತ್ತು. ಅಂದರೆ ೨೦೧೬ರಲ್ಲಿ ಎಮ್ಮೆಕೆರೆ ಮೈದಾನದಲ್ಲಿ ಆಟವಾಡುತ್ತಿದ್ದ ಸಂದರ್ಭ ಎರಡು ಗುಂಪುಗಳ ಮಧ್ಯೆ ಸಂಘರ್ಷವಾಗಿತ್ತು. ಈ ಬಗ್ಗೆ ಪ್ರಕರಣವೂ ದಾಖಲಾಗಿತ್ತು. ೨೦೧೯ರಲ್ಲೂ ಮಹೇಂದ್ರ ಶೆಟ್ಟಿಗೆ ರಾಹುಲ್ ಹಲ್ಲೆ ಮಾಡಿದ ಬಗ್ಗೆ ಕೇಸು ದಾಖಲಾಗಿತ್ತು. ೨೦೨೦ರಲ್ಲಿ ಕಾರ್ತಿಕ್ ಶೆಟ್ಟಿ ಮತ್ತಾತನ ಸ್ನೇಹಿತರ ಮೇಲೆ ರಾಹುಲ್ ದಾಳಿ ಮಾಡಿದ್ದ. ಈ ಕಾರಣದಿಂದ ರಾಹುಲ್ ಕೊಲೆಗೆ ಮಹೇಂದ್ರ ಶೆಟ್ಟಿ ಮತ್ತು ಕಾರ್ತಿಕ್ ಶೆಟ್ಟಿಯ ಸಹಚರರು ಸ್ಕೆಚ್ ರೂಪಿಸಿದ್ದರು. ಆರೋಪಿ ಸುಶಿತ್‌ನ ಮೇಲೆ ೧ ಕೊಲೆ ಯತ್ನ ಪ್ರಕರಣ ಹಾಗೂ ಅಕ್ಷಯ್ ಕುಮಾರ್‌ನ ಮೇಲೆ ೧ ಹಲ್ಲೆ ಪ್ರಕರಣ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಎಂದು ತಿಳಿಸಿದ್ದಾರೆ.
*೧೩ಮಂದಿ ಪ್ರಕರಣದಲ್ಲಿ ಭಾಗಿ: ರಾಹುಲ್ ಕೊಲೆ ಪ್ರಕರಣದಲ್ಲಿ ಒಟ್ಟು ೧೩ ಮಂದಿ ಭಾಗಿಯಾಗಿದ್ದು, ಇದೀಗ ೬ ಮಂದಿಯನ್ನು ಬಂಧಿಸಲಾಗಿದೆ. ಇನ್ನೂ ೭ ಮಂದಿಯ ಬಂಧನ ಬಾಕಿಯಿದೆ. ಅವರಿಗಾಗಿ ಶೋಧ ಮುಂದುವರಿದಿದೆ. ೧೩ ಮಂದಿ ಆರೋಪಿಗಳಲ್ಲಿ ೮ ಮಂದಿ ಆರೋಪಿಗಳು ಕ್ರಿಮಿನಲ್ ಹಿನ್ನಲೆಯುಳ್ಳವರು ಎಂದು ಶಶಿಕುಮಾರ್ ತಿಳಿಸಿದರು.
*ಕೊಲೆಯಲ್ಲಿ ನೇರ ಆರೋಪಿಯಾಗಿರುವ ಮಹೇಂದ್ರ ಶೆಟ್ಟಿ ಗಲ್ಫ್‌ನಲ್ಲಿ ಮೆಕ್ಯಾನಿಕ್ ಆಗಿದ್ದರೆ, ಅಕ್ಷಯ್ ಅಬುಧಾಬಿಯಲ್ಲಿ ಎಸಿ ಮೆಕ್ಯಾನಿಕ್ ಆಗಿದ್ದ. ಇವರಿಬ್ಬರೂ ಕಳೆದ ಮಾರ್ಚ್‌ನಲ್ಲಿ ವಿದೇಶದಿಂದ ಬಂದಿದ್ದು, ಇಲ್ಲೇ ಉದ್ಯೋಗ ಮಾಡಲು ಯೋಜನೆ ರೂಪಿಸಿದ್ದರು. ಸುಶೀತ್ ನಗರದ ಇಂಜಿನಿಯರ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ದಿನೇಶ್ ಬಂಗೇರಾ ನಿರುದ್ಯೋಗಿಯಾಗಿದ್ದಾನೆ.
*ಆರೋಪಿ ಶುಭಂ ಶೆಟ್ಟಿಯು ಇತರರ ಜತೆ ಸೇರಿ ಕೊಲೆಗೆ ಒಳಸಂಚು ನಡೆಸಿದ್ದ. ಈತನು ಕಾರ್ತಿಕ್ ಶೆಟ್ಟಿ ಹಾಗೂ ಆತನ ತಮ್ಮ ಭರತ್ ಶೆಟ್ಟಿಯನ್ನು ಎಮ್ಮೆಕೆರೆಗೆ ಕರೆದುಕೊಂಡು ಹೋಗಿ ಎಮ್ಮೆಕೆರೆ ತಂಡದ ಯುವಕರಿಗೆ ಪರಿಚಯಿಸಿದ್ದ, ಮಹೇಂದ್ರ ಮತ್ತು ಕಾರ್ತಿಕ್ ತಂಡದ ಮೇಲೆ ಹಲ್ಲೆ ಮಾಡಿದ್ದ ರಾಹುಲ್‌ನನ್ನು ಕೊಲೆ ಮಾಡಬೇಕು ಎಂಬುದಾಗಿ ಮಾತುಕತೆ ಮಾಡಲು ವ್ಯವಸ್ಥೆ ಮಾಡಿ ಶುಭಂ ಶೆಟ್ಟಿ ಸಂಚು ರೂಪಿಸಿದ್ದ. ಘಟನೆ ನಡೆದ ಬಳಿಕ ಆರೋಪಿ ಅಕ್ಷಯ್ ಕುಮಾರ್‌ನ ಜತೆ ಸಂಪರ್ಕದಲ್ಲಿದ್ದು, ಆಶ್ರಯ ನೀಡಲು ಹಾಗೂ ಅವರಿಗೆ ಇಲ್ಲಿಯ ಸ್ಥಿತಿಗತಿಗಳನ್ನು ತಿಳಿಸಿ ಪೊಲೀಸ್ ದಸ್ತಗಿರಿಯಿಂದ ತಪ್ಪಿಸಿಕೊಂಡು ತಲೆಮರೆಸಿಕೊಳ್ಳಲು ಸಹಕರಿಸಿದ್ದ. ಇನ್ನೊಬ್ಬ ಆರೋಪಿ ವಿಷ್ಣು ಇತರ ಆರೋಪಿಗಳ ಜತೆ ಸೇರಿಕೊಂಡು ಘಟನೆಗೆ ಒಳಸಂಚು ನಡೆಸಿದ್ದ. ಅಲ್ಲದೆ ಆರೋಪಿಗಳಿಗೆ ಪೊಲೀಸ್ ಬಂಧನದಿಂದ ತಪ್ಪಿಸಿಕೊಳ್ಳಲು ಸಹಕರಿಸಿದ್ದ. ಮೊಬೈಲ್‌ನ್ನು ತಾನು ಕೆಲಸ ನಿರ್ವಹಿಸುವ ಸ್ಥಳದಲ್ಲಿಟ್ಟುಕೊಂಡಿದ್ದ ಎಂದು ಶಶಿಕುಮಾರ್ ತಿಳಿಸಿದ್ದ.
ಸುದ್ದಿಗೋಷ್ಠಿಯಲ್ಲಿ ನಗರ ಕಾನೂನು ಸುವ್ಯವಸ್ಥಾ ವಿಭಾಗದ ಉಪ ಪೊಲೀಸ್ ಆಯುಕ್ತ ಹರಿರಾಂ ಶಂಕರ್, ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಪಿ.ಎ. ಹೆಗಡೆ, ಪಾಂಡೇಶ್ವರ ಇನ್‌ಸ್ಪೆಕ್ಟರ್ ಮಂಜುನಾಥ್ ಉಪಸ್ಥಿತರಿದ್ದರು.










