ಭಾರೀ ಪ್ರತಿಭಟನೆ: ಶಾಹೀನ್ ಬಾಗ್ನಲ್ಲಿ ಇಂದು ತೆರವು ಕಾರ್ಯಾಚರಣೆ ಅಭಿಯಾನ ಸ್ಥಗಿತ

Photo:ANI
ಹೊಸದಿಲ್ಲಿ: ವಿವಾದಿತ ಪೌರತ್ವ ಕಾನೂನಿನ ವಿರುದ್ಧದ ಬೃಹತ್ ಪ್ರತಿಭಟನೆಯ ಕೇಂದ್ರವಾಗಿದ್ದ ಶಾಹೀನ್ ಬಾಗ್ನಲ್ಲಿ ದಕ್ಷಿಣ ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ (ಎಸ್ಡಿಎಂಸಿ) ಸೋಮವಾರ ಬೆಳಗ್ಗೆ ಆರಂಭಿಸಿರುವ ಅತಿಕ್ರಮಣ ತೆರವು ಕಾರ್ಯಾಚರಣೆಯು ಸ್ಥಳೀಯ ಶಾಸಕ, ಆಮ್ ಆದ್ಮಿ ಪಕ್ಷದ (ಎಎಪಿ) ಅಮಾನತುಲ್ಲಾ ಖಾನ್ ಮಧ್ಯಪ್ರವೇಶಿಸಿದ ನಂತರ ಸ್ಥಗಿತವಾಗಿದೆ ಎಂದು NDTV ವರದಿ ಮಾಡಿದೆ.
ಬುಲ್ಡೋಝರ್ಗಳು ಆಗಮಸುತ್ತಿದ್ದಂತೆ ಓಖ್ಲಾ ಶಾಸಕ ಅಮಾನತುಲ್ಲಾ ಖಾನ್ ಸೇರಿದಂತೆ ಕಾಂಗ್ರೆಸ್ ಹಾಗೂ ಎಎಪಿ ಬೆಂಬಲಿಗರು ಪ್ರದೇಶವನ್ನು ತಲುಪಿದರು. ಖಾನ್ ಅವರು ಪ್ರದೇಶದಲ್ಲಿನ ಎಲ್ಲಾ ಅಕ್ರಮ ಕಟ್ಟಡ ತೆಗೆದುಹಾಕಲಾಗಿದೆ ಹಾಗೂ ಈಗ ಯಾವುದೂ ಇಲ್ಲ ಎಂದು ಹೇಳಿದರು.
ಈ ಮೊದಲು ಶುಕ್ರವಾರ ನಡೆಯಬೇಕಿದ್ದ ನೆಲಸಮ ಕಾರ್ಯಾಚರಣೆಯನ್ನು ಸೂಕ್ತ ಭದ್ರತಾ ಪಡೆಯ ಅಲಭ್ಯತೆಯಿಂದಾಗಿ ರದ್ದುಪಡಿಸಲಾಗಿತ್ತು.
ಸೋಮವಾರ ಬೆಳಗ್ಗೆ ದಿಲ್ಲಿ ಪೊಲೀಸರು ಧ್ವಂಸ ಕಾರ್ಯಾಚರಣೆಗೆ ಸ್ಥಳದಲ್ಲಿ ಭದ್ರತೆಯನ್ನು ಒದಗಿಸಿದ್ದರು.
ಭಾರೀ ಪೊಲೀಸ್ ಉಪಸ್ಥಿತಿಯ ನಡುವೆ ಅತಿಕ್ರಮಣವನ್ನು ತೆಗೆದುಹಾಕಲು ಬುಲ್ಡೋಝರ್ಗಳು ಪ್ರದೇಶವನ್ನು ತಲುಪುತ್ತಿರುವ ದೃಶ್ಯಗಳು ಕಂಡುಬಂದವು.