ಮೈಸೂರು: ಬಿಜೆಪಿ ಮುಖಂಡನಿಂದ ವಂಚನೆಯಾಗಿದೆ ಎಂದು ಡೆತ್ ನೋಟ್ ಬರೆದಿಟ್ಟು ಉದ್ಯಮಿ ಆತ್ಮಹತ್ಯೆ
ಎನ್ .ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಮೈಸೂರು, ಮೇ 9: ಉದ್ಯಮಿಯೊಬ್ಬರು ಬಿಜೆಪಿ ಮುಖಂಡ ಅಪ್ಪಣ್ಣ ಅವರಿಂದ ವಂಚನೆಯಾಗಿದೆ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡ ಹಾಗೂ ಜಂಗಲ್ ಲಾಡ್ಜಸ್ ಮತ್ತು ರೆಸಾಟ್೯ ಅಧ್ಯಕ್ಷ ಅಪ್ಪಣ್ಣ ವಿರುದ್ಧ ಮೈಸೂರಿನ ಎನ್ .ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಮೈಸೂರಿನ ಉದ್ಯಮಿ ಶರತ್ ಆತ್ಮಹತ್ಯೆ ಮಾಡಿಕೊಂಡವರು. ಬಿಜೆಪಿ ಮುಖಂಡ ಅಪ್ಪಣ್ಣ ಮತ್ತು ಪ್ರವೀಣ್ ಅವರಿಂದ ತನಗೆ ವಂಚನೆಯಾಗಿದೆ ಎಂದು ಇವರು ಎಪ್ರಿಲ್ 18ರಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರೆನ್ನಲಾಗಿದೆ. ಈ ಸಂಬಂಧ ಉದ್ಯಮಿ ಶರತ್ ಅವರ ಪತ್ನಿ ಕೃಪಾಲಿನಿ ಎನ್.ಆರ್.ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಶರತ್ ಅವರು ಬಿಜೆಪಿ ಮುಖಂಡ ಅಪ್ಪಣ್ಣರಿಗೆ 8 ಲಕ್ಷ ರೂ. ಸಾಲ ನೀಡಿದ್ದರು ಎನ್ನಲಾಗಿದೆ. ಆದರೆ ಅಪ್ಪಣ್ಣ ಸಾಲದ ಹಣವನ್ನು ವಾಪಸ್ ಕೊಡದೆ ಸತಾಯಿಸುತ್ತಿದ್ದರು ಎನ್ನಲಾಗಿದೆ. ಜೊತೆಗೆ ಪ್ರವೀಣ್ ಎಂಬವರ ಜೊತೆಗೆ ಶರತ್ ಪಾಲುದಾರಿಕೆ ವ್ಯವಹಾರ ನಡೆಸುತ್ತಿದ್ದು, ಅವರೂ ಸಹ 50 ಶೇ. ಶೇರು ಕೊಡದೆ ವಂಚನೆ ಮಾಡಿರುವುದಾಗಿ ತನ್ನ ಬಳಿ ಪತಿ ಹೇಳಿದ್ದರು ಎಂದು ಕೃಪಾಲಿನಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಇದರಿಂದ ಬೇಸತ್ತು ಎಪ್ರಿಲ್ 18 ರಂದು ಬಿಜೆಪಿ ಮುಖಂಡ ಅಪ್ಪಣ್ಣ ಹಾಗೂ ಪ್ರವೀಣ್ ಹೆಸರನ್ನು ಡೆತ್ ನೋಟ್ ನಲ್ಲಿ ಬರೆದಿಟ್ಟು ಉದ್ಯಮು ಶರತ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಎನ್ .ಆರ್. ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.







