4 ವರ್ಷಗಳಲ್ಲಿ ಪುತ್ತೂರಿಗೆ ರೂ.808 ಕೋಟಿ ಅನುದಾನ: ಶಾಸಕ ಸಂಜೀವ ಮಠಂದೂರು

ಪುತ್ತೂರು: ಶಾಸಕನಾಗಿ ಆಯ್ಕೆಯಾದ ನಾಲ್ಕು ವರ್ಷಗಳಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ರೂ.808ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆದಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಮೇ.9ರಂದು ದರ್ಬೆ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ರೂ.7ಕೋಟಿ, ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ರೂ.1.29ಕೋಟಿ, ಲೋಕೋಪಯೋಗಿ ಇಲಾಖೆಯಿಂದ ಪ.ಜಾತಿ & ಪಂಗಡದ ಕಾಲನಿ ರಸ್ತೆ ಅಭಿವೃದ್ಧಿಗೆ ರೂ.19.02ಕೋಟಿ, ಲೋಕೋಪಯೋಗಿ ಇಲಾಖೆಯ 5054 ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಮತ್ತೂರು ಉಪ್ಪಿನಂಗಡಿ ಚತುಷ್ಪಥ ರಸ್ತೆ ಕಾಮಗಾರಿಗೆ ರೂ.22ಕೋಟಿ, ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ದೇವಸ್ಯ, ಕುಕ್ಕುಪುಣಿ, ಅಂದ್ರಟ್ಟ, ಕಿಜಾನ, ನೀರ್ಕಜೆ, ಮಂಜ ಎಂಬಲ್ಲಿ ಸೇತುವೆ ಪುನರ್ ನಿರ್ಮಾಣ, ನವೀಕರಣ, ಸಂರಕ್ಷಣೆ ಕಾಮಗಾರಿಗಳಿಗೆ ರೂ.7.60ಕೋಟಿ, ಲೋಕೋಪಯೋಗಿ ಇಲಾಖೆಯ ಶಾಲಾ ಸಂಪರ್ಕ ಸೇತು ಮತ್ತು ಗ್ರಾಮಬಂಧು ಯೋಜನೆಯಡಿ ಕಾಲುಸಂಕಗಳ ನಿರ್ಮಾಣಕ್ಕೆ ರೂ.7.61ಕೋಟಿ, ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಅಭಿವೃದ್ಧಿ ಅನುದಾನಗಳು ರೂ.68.45ಕೋಟಿ, ಶಾಲಾ, ಕಾಲೇಜು ಕಟ್ಟಡಗಳು, ಐಟಿಐ ಅಭಿವೃದ್ಧಿ, ಕೆಯ್ಯೂರು ಕೆಪಿಎಸ್ ಕಲೇಜು, ಮೌಲಾನಾ ಆಝಾದ್, ಡಾ. ಅಂಬೇಡ್ಕರ್ ವಸತಿ ಶಾಲೆಗೆಳಿಗೆ ರೂ.40 ಕೋಟಿ, ಸರ್ಕಾರಿ ಶಾಲೆಗಳು, ಅಂಗನವಾಡಿ & ಸರಕಾರಿ ಆಸ್ಪತ್ರೆಗಳಿಗೆ ಅಗತ್ಯ ಉಪಕರಣಗಳ ಪೂರೈಕೆಗೆ ರೂ.5ಕೋಟಿ, ಬನ್ನೂರು ಅನೆಮಜಲು ಎಂಬಲ್ಲಿ ನ್ಯಾಯಾಲಯ ನೂತನ ಸಂಕಿರ್ಣ, ಬಾರ್ ಅಸೋಸಿಯೇಷನ್ ಕಟ್ಟಡ, ವಸತಿಗೃಹ ಕಟ್ಟಗಳ ನಿರ್ಮಾಣಕ್ಕೆ ರೂ.55ಕೋಟಿ, ಸಣ್ಣ ನೀರಾವರಿ ಇಲಾಖೆಯ ಪಶ್ಚಿಮವಾಹಿನಿ ಯೋಜನೆಯಡಿ ಬೆಳೆಯೂರು ಎಂಬಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ರೂ.51.88ಕೋಟಿ, ಸಣ್ಣ ನೀರಾವರಿ ಇಲಾಖೆಯ ಪಶ್ಚಿಮವಾಹಿನಿ ಯೋಜನೆಯಡಿ ಕಿಂಡಿ ಅಣೆಕಟ್ಟುಗಳು ನಿರ್ಮಾಣಕ್ಕೆ ರೂ.60.25ಕೋಟಿ, 2021-22 ನೇ ಸಾಲಿನ ಸಣ್ಣ ನೀರಾವರಿ ಇಲಾಖೆಯ ಅನುದಾನದಲ್ಲಿ ಕೃಷಿ ಭೂಮಿ ಸಂರಕ್ಷಣೆ ಕಾಮಗಾರಿಗಳಿಗೆ ರೂ.24.43ಕೋಟಿ, ಕೆರೆ ಅಭಿವೃದ್ಧಿಗೆ ರೂ.2ಕೋಟಿ, ಕೇಂದ್ರ ಸರ್ಕಾರದ ಐಪಿಡಿಎಸ್ ಯೋಜನೆಯಲ್ಲಿ ಮೆಸ್ಕಾಂನ ಭೂಗತ ಕೇಬಲ್ ಅಳವಡಿಕೆಗೆ ರೂ.20.80ಕೋಟಿ, ಕೇಂದ್ರ ಸರ್ಕಾರದ ದೀನ ದಯಾಳ್ ಉಪಾಧ್ಯಾಯ ಗಾಮ ಜ್ಯೋತಿ ಯೋಜನೆಯಡಿ ವಿದ್ಯುತ್ ಸಂಪರ್ಕಗಳ ಉನ್ನತಿಕರಣಕ್ಕೆ ರೂ.3.96ಕೋಟಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಒಟ್ಟು 808 ಕೋಟಿ ರೂ ಬಿಉಗಡೆಯಾಗಿದೆ ಎಂದು ಹೇಳಿದರು.
ರೂ.375 ಕೋಟಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ:
ಪುತ್ತೂರು ವಿಧಾನ ಸಭಾ ವ್ಯಾಪ್ತಿಯ ಪುತ್ತೂರು ತಾಲೂಕಿನ 22 ಹಾಗೂ ಬಂಟ್ವಾಳ ತಾಲೂಕಿನ 11 ಪಂಚಾಯತ್‍ಗಳು ಹಾಗೂ ವಿಟ್ಲ ಪಟ್ಟಣ ಪಂಚಾಯತ್‍ಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಇದಕ್ಕಾಗಿ ರೂ.375 ಕೋಟಿಯ ಡಿ.ಪಿ,ಆರ್ ಸಿದ್ದವಾಗಿದೆ. ಇದರ ಮುಖಾಂತರ ಕಡೇಶಿವಾಲಯ ಎಎಂಆರ್ ಡ್ಯಾಮ್‍ನಿಂದ ನೀರನ್ನು ಸರಬರಾಜು ಮಾಡಿ ಬಲ್ನಾಡು ಹಾಗೂ ಪುಣಚದಲ್ಲಿ ಓವರ್‍ಹೆಡ್ ಟ್ಯಾಂಕ್‍ಗಳಲ್ಲಿ ಸಂಗ್ರಹಿ ಬಳಿಕ ಅಲ್ಲಿಂದ ವಿವಿಧ ಪಂಚಾಯತ್‍ಗಳ ಜಲ ಜೀವನ್ ಮಿಷನ್ ಯೋಜನೆಯ ಮೂಲಕ ಮನೆಗಳಿಗೆ ಸರಬರಾಜು ಮಾಡಲಾಗುವುದು ಎಂದು ಶಾಸಕರು ಮಾಹಿತಿ ನೀಡಿದರು.
ಪುತ್ತೂರಿನಲ್ಲಿ ಕೈಗಾರಿಕೆಗಳ ಸ್ಥಾಪನೆ ಅವಕಾಶ ಕಲ್ಪಿಸಲು ಕೈಗಾರಿಕಾ ವಲಯ ನಿರ್ಮಾಣಕ್ಕೆ ಚಿಕ್ಕಮುಡ್ನೂರು ಗ್ರಾಮದಲ್ಲಿ 100ಎಕರೆ ಗುರುತಿಸಲಾಗಿದೆ. ಇದು ಸರ್ವೆ ಆಗಿದ್ದು ಸರಕಾರದ ಹಂತದಲ್ಲಿದೆ. ಅಲ್ಲದೆ ಸಣ್ಣ ಕೈಗಾಗಿಕೆಗಳ ಸ್ಥಾಪನೆಗೆ ಅವಕಾಶ ನೀಡಲು ಆರ್ಯಾಪುನಲ್ಲಿ 15 ಎಕರೆ ಭೂಮಿಯನ್ನು ಗುರುತಿಸಲಾಗಿದೆ.
ಕಬಕ-ವಿಟ್ಲ ರಾಜ್ಯ ಹೆದ್ದಾರಿಯ ಅಭಿವೃದ್ಧಿ ಕಳೆದ ನಾಲ್ಕು ವರ್ಷಗಳ ಹಿಂದೆ ಟೆಂಡರ್ ಆಗಿದ್ದು ಗುತ್ತಿಗೆದಾರ ಕಾಮಗಾರಿ ನಡೆಸದೇ ಬಾಕಿಯಿರಿಸಿದ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಇದೀಗ ಹೊಸ ಟೆಂಡರ್ ನಡೆಸಲಾಗಿದ್ದು ರೂ.15ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಯಾಗಲಿದ್ದು ಏಳು ಮೀಟರ್ ಅಗಲವಾಗಲಿದೆ. ಕಲ್ಲಡ್ಕ-ಕಾಂಞಂಗಾಡ್ ರಾಜ್ಯ ಹೆದ್ದಾರಿಯ ಮಂಗಿಲಪದವಿನಿಂದ ಅಡ್ಯನಡ್ಕ ತನಕ ರಸ್ತೆ ಅಭಿವೃದ್ಧಿಗೆ ರೂ.8ಕೋಟಿ ಅನುದಾನ ಮಂಜೂರುಗೊಂಡಿದೆ.ಶಿಥಿಲಾವಸ್ಥೆಯಲ್ಲಿರುವ ವಿಟ್ಲ ಹಾಗೂ ಉಪ್ಪಿನಂಗಡಿಯ ನಾಡ ಕಚೇರಿಗಳಿಗೆ ಹೊಸ ಕಟ್ಟಡಗಳ ನಿರ್ಮಾಣಕ್ಕಾಗಿ ತಲಾ ರೂ.18ಲಕ್ಷ ಅನುದಾನ ಮಂಜೂರಾಗಿದೆ.
ರಾಜೀವ ಗಾಂಧಿ ವಸತಿ ನಿಗಮದಿಂದ ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಒಟ್ಟು 800 ಮನೆಗಳು ಮಂಜೂರಾಗಿದೆ. ಪ್ರತಿ ಪಂಚಾಯತ್‍ಗಳಿಗೆ 30-50 ಮನೆಗಳು ದೊರೆಯಲಿದೆ. ನಗರ ಸಭಾ ವ್ಯಾಪ್ತಿಯಲ್ಲಿ ವಸತಿ ನಿವೇಶನಕ್ಕೆ 1900 ಅರ್ಜಿಗಳಿದ್ದು ಇದಕ್ಕಾಗಿ ನಗರದ ವಿವಿಧ ಕಡೆಗಳಲ್ಲಿ ಒಟ್ಟು 15 ಎಕ್ರೆ ಜಾಗವನ್ನು ಗುರುತಿಸಲಾಗಿದೆ. ಇದರಲ್ಲಿ ಪ.ಜಾತಿ, ಪ.ಪಂಗಡ, ವಿಕಲಚೇತನರು, ವಿಧವೆಯರು ಹಾಗೂ ಹಿರಿಯ ನಾಗರಿಕರಿಗೆ ಆಧ್ಯತೆ ನೀಡಿ ವಿತರಿಸಲಾಗುವುದು.
ರಾಜ್ಯದಲ್ಲಿಯೇ ಪುತ್ತೂರಿನಲ್ಲಿ ಅತೀ ಹೆಚ್ಚು ಪ್ರಥಮ ದರ್ಜೆ ಕಾಲೇಜುಗಳಿದ್ದು ಇದರ ಅಭಿವೃದ್ಧಿ ತಲಾ ರೂ.1ಕೋಟಿ ಅನುದಾನ ನೀಡಲಾಗಿದೆ. ಕೋವಿಡ್ ಸಂದರ್ಭದಲ್ಲಿ ಶಾಸಕರ ವಾರ್ ರೂಂ ಮೂಲಕ ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಕಾರ್ಯನಿರ್ವಹಿಸಿದೆ ಎಂದರು.ಜನರ ಹಿತ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಎಸ್.ಪಿ ಕಚೇರಿಯನ್ನು ತೆರೆಯಲಾಗುವುದು. ಪೊಲೀಸರ ವಸತಿಗೃಹ ಹಾಗೂ ಪರೇಡ್‍ಗೆ ಕೆಮ್ಮಿಂಜೆಯಲ್ಲಿ 15 ಎಕರೆ, ಎಸ್.ಪಿ ಕಚೇರಿಗೆ ಚಿಕ್ಕಮುಡ್ನೂರಿನಲ್ಲಿ 2ಎಕರೆ ಹಾಗೂ ಎಸ್.ಪಿ ಕಚೇರಿಯ ಅಧಿಕಾರಿಗಳ ವಸತಿಗೃಹಕ್ಕೆ ಬನ್ನೂರಿನಲ್ಲಿ 2.5 ಎಕರೆ ಜಾಗವನ್ನು ಗುರುತಿಸಲಾಗಿದೆ ಎಂದರು.
ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್, ಪೂಡಾದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಶಾಂತಿವನ, ನಗರ ಮಂಡಲದ ಅಧ್ಯಕ್ಷ ಪಿ.ಜಿ ಜಗನ್ನಿವಾಸ ರಾವ್, ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಆರ್.ಸಿ ನಾರಾಯಣ, ಯುವರಾಜ್ ಪೆರಿಯತ್ತೋಡಿ, ಜಯಶ್ರೀ ಶೆಟ್ಟಿ, ಜಯಂತಿ ನಾಯಕ್, ರಾಜೇಶ್ ಬನ್ನೂರು ಮೊದಲಾದವರು ಉಪಸ್ಥಿತರಿದ್ದರು.