ದೇವಸ್ಥಾನಗಳಲ್ಲಿ ಧ್ವನಿವರ್ಧಕಗಳಲ್ಲಿ ಭಕ್ತಿಗೀತೆ ಅಭಿಯಾನ
ಮಂಗಳೂರು : ಮಸೀದಿಗಳಲ್ಲಿ ಮುಂಜಾವ ಧ್ವನಿವರ್ಧಕ ಮೂಲಕ ಆಝಾನ್ ಕರೆಗೆ ಪ್ರತಿಯಾಗಿ ದೇವಸ್ಥಾನಗಳಲ್ಲಿ ಧ್ವನಿವರ್ಧಕಗಳ ಮೂಲಕ ಭಕ್ತಿಗೀತೆ, ಸುಪ್ರಭಾತ ಪಠಿಸಬೇಕು ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕರೆ ನೀಡಿದ್ದಾರೆ.
ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ ಮೂಡುಶೆಡ್ಡೆಯ ಬಳಿ ಧ್ವನಿವರ್ಧಕದ ಮೂಲಕ ಕೊರಗಜ್ಜನ ಭಕ್ತಿಗೀತೆಗಳನ್ನು ಕೇಳಿಸಲಾಗಿದೆ. ಈ ಜಾಗವು ಮೂಡುಶೆಡ್ಡೆ ಮಸೀದಿಯಿಂದ ಸುಮಾರು ೨೫೦ ಮೀ.ದೂರದಲ್ಲಿದೆ. ಈ ಸಂದರ್ಭ ಅಯ್ಯಪ್ಪ ಭಕ್ತ ವೃಂದದ ಬಳಿ ಶ್ರೀ ರಾಮಸೇನೆಯ ಜಿಲ್ಲಾಧ್ಯಕ್ಷ ಪ್ರದೀಪ್ ಮೂಡುಶೆಡ್ಡೆ ಸಹಿತ ಇಬ್ಬರಿದ್ದರು ಎನ್ನಲಾಗಿದೆ. ಉಳಿದಂತೆ ಜಿಲ್ಲೆಯ ಎಲ್ಲೂ ಈ ಕರೆಗೆ ಸ್ಪಂದನ ಸಿಗಲಿಲ್ಲ.
ರಾಜ್ಯದ ೧ ಸಾವಿರಕ್ಕೂ ಅಧಿಕ ದೇವಸ್ಥಾನಗಳ ಧ್ವನಿವರ್ಧಕಗಳಲ್ಲಿ ಹನುಮಾನ್ ಚಾಲೀಸ್ ಸಹಿತ ಭಕ್ತಿಗೀತೆ, ಸುಪ್ರಭಾತ ಕೇಳಿಸಲಾಗುವುದು ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಈ ಸಂದರ್ಭ ಯಾವುದೇ ಅಹಿತರ ಘಟನೆ ನಡೆಯದಂತೆ ಪೊಲೀಸ್ ಇಲಾಖೆಯು ಮುನ್ನೆಚ್ಚರಿಕೆ ವಹಿಸಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಶೆಡ್ಡೆ ಗ್ರಾಮದಲ್ಲಿ ಶಿವಾಜಿ ಪ್ರತಿಮೆ ಬಳಿ ಇರುವ ಅಯ್ಯಪ್ಪ ಭಕ್ತವೃಂದದ ತಾತ್ಕಾಲಿಕ ಶೆಡ್ (ಶಿಬಿರ) ಮುಂಭಾಗದಲ್ಲಿ ಮೈಕ್ ಅಳವಡಿಸಿ ಬೆಳಗ್ಗೆ ೫:೧೦ರಿಂದ ಸುಮಾರು ೪೦ ನಿಮಿಷಗಳ ಕಾಲ ಕೊರಗಜ್ಜನ ಭಕ್ತಿಗೀತೆಗಳನ್ನು ಹಾಕಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಬೇರೆ ಮಸೀದಿ ಅಥವಾ ಮುಸ್ಲಿಮರ ಯಾವುದೇ ಧಾರ್ಮಿಕ ಕೇಂದ್ರಗಳ ಬಳಿ ಈ ರೀತಿಯ ಚಟುವಟಿಕೆ ನಡೆಸಿರುವುದು ಗಮನಕ್ಕೆ ಬಂದಿಲ್ಲ. ಪೊಲೀಸರು ಮುಂಜಾವದಿಂದಲೇ ವಿಶೇಷ ನಿಗಾ ವಹಿಸಿದ್ದರು ಎಂದಿದ್ದಾರೆ.







