ಕೇಂದ್ರ ಸಚಿವ ಅಜಯ್ ಮಿಶ್ರಾ ರೈತರಿಗೆ ಬೆದರಿಕೆ ಒಡ್ಡಬಾರದಿತ್ತು: ಅಲಹಾಬಾದ್ ಹೈಕೋರ್ಟ್
ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣ

ajay mishra(PTI)
ಹೊಸದಿಲ್ಲಿ,ಮೇ 9: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿಯ ಇತರ ನಾಲ್ವರು ಆರೋಪಿಗಳಿಗೆ ಸೋಮವಾರ ಜಾಮೀನು ತಿರಸ್ಕರಿಸಿದ ಅಲಹಾಬಾದ್ ಉಚ್ಚ ನ್ಯಾಯಾಲಯವು,ಘಟನೆಗೆ ಕೆಲವು ದಿನಗಳ ಮೊದಲು ಕೇಂದ್ರ ಸಚಿವ ಅಜಯ ಮಿಶ್ರಾ ಅವರು ರೈತರಿಗೆ ಬೆದರಿಕೆಯೊಡ್ಡುವ ಹೇಳಿಕೆಗಳನ್ನು ನೀಡಬಾರದಿತ್ತು ಎಂದು ಹೇಳಿತು. ಮಿಶ್ರಾರ ಪುತ್ರ ಆಶಿಷ್ ಮಿಶ್ರಾ ಕಳೆದ ವರ್ಷದ ಅ.3ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನಾ ನಿರತ ರೈತರ ಮೇಲೆ ವಾಹನವನ್ನು ನುಗ್ಗಿಸಿದ ಆರೋಪಿಯಾಗಿದ್ದಾನೆ. ಅಜಯ ಮಿಶ್ರಾ ರೈತರಿಗೆ ಬೆದರಿಕೆಯೊಡ್ಡಿರದಿದ್ದರೆ ಸಾವುಗಳು ಸಂಭವಿಸುತ್ತಿರಲಿಲ್ಲ ಎಂದು ಉಲ್ಲೇಖಿಸಿರುವ,ವಿಶೇಷ ತನಿಖಾ ತಂಡವು ಸಲ್ಲಿಸಿರುವ ಅರೋಪಪಟ್ಟಿಯನ್ನು ಉಚ್ಚ ನ್ಯಾಯಾಲಯವು ಪ್ರಸ್ತಾಪಿಸಿತು. ಹಿಂಸಾಚಾರದಲ್ಲಿ ನಾಲ್ವರು ರೈತರು ಮತ್ತು ಓರ್ವ ಪತ್ರಕರ್ತ ಸೇರಿದಂತೆ ಎಂಟು ಜನರು ಕೊಲ್ಲಲ್ಪಟ್ಟಿದ್ದರು.
ಲಖಿಂಪುರ ಖೇರಿ ಘಟನೆಗೆ ಕೆಲವು ದಿನಗಳ ಮೊದಲು ಪ್ರದೇಶದಲ್ಲಿ ಸಭೆಯೊಂದರಲ್ಲಿ ಭಾಷಣ ಮಾಡಿದ್ದ ಅಜಯ ಮಿಶ್ರಾ,ರೈತರು ತಮ್ಮ ಪ್ರತಿಭಟನೆಯನ್ನು ನಿಲ್ಲಿಸದಿದ್ದರೆ ಎರಡು ನಿಮಿಷಗಳಲ್ಲಿ ಅವರಿಗೆ ಗತಿ ಕಾಣಿಸುವುದಾಗಿ ಬೆದರಿಕೆಯೊಡ್ಡಿದ್ದರು.ರಾಜಕೀಯ ವ್ಯಕ್ತಿಗಳು ಸಭ್ಯ ಭಾಷೆಯಲ್ಲಿ ಸಾರ್ವಜನಿಕ ಹೇಳಿಕೆಗಳನ್ನು ನೀಡಬೇಕು. ತಮ್ಮ ಹುದ್ದೆಯ ಸ್ಥಾನಮಾನಕ್ಕೆ ಮತ್ತು ಘನತೆಗೆ ಅನುಗುಣವಾಗಿ ಅವರು ನಡೆದುಕೊಳ್ಳಬೇಕು. ಕಾನೂನು ರೂಪಕರನ್ನು ಕಾನೂನು ಉಲ್ಲಂಘಕರಾಗಿ ನೋಡಲಾಗುವುದಿಲ್ಲ ಎಂದು ಉಚ್ಚ ನ್ಯಾಯಾಲಯವು ಹೇಳಿತು.ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದ ಉ.ಪ್ರದೇಶ ಆಗಿನ ಉಪಮುಖ್ಯಮಂತ್ರಿ ಕೆ.ಪಿ.ವೌರ್ಯ ಅವರನ್ನು ಉಚ್ಚ ನ್ಯಾಯಾಲಯವು ಕಟುವಾಗಿ ಟೀಕಿಸಿತು.
ಪ್ರಮುಖ ಆರೋಪಿ ಆಶಿಷ್ ಮಿಶ್ರಾನ ಜಾಮೀನನ್ನು ಸರ್ವೋಚ್ಚ ನ್ಯಾಯಾಲಯವು ರದ್ದುಗೊಳಿಸಿದ ಬಳಿಕ ಆತ ಇತ್ತೀಚಿಗೆ ಜೈಲಿಗೆ ವಾಪಸಾಗಿದ್ದಾನೆ. ಫೆ.10ರಂದು ಆತನಿಗೆ ಜಾಮೀನು ಮಂಜೂರು ಮಾಡಿದ್ದ ಅಲಹಾಬಾದ್ ಉಚ್ಚ ನ್ಯಾಯಾಲಯವು ಸೋಮವಾರ, ಪ್ರಮುಖ ಆರೋಪಿ ಮತ್ತು ಸಹಆರೋಪಿಗಳು ಪ್ರಭಾವಿ ಕುಟುಂಬಗಳಿಗೆ ಸೇರಿದ್ದಾರೆ,ಅವರು ಸಾಕ್ಷಾಧಾರಗಳನ್ನು ತಿರುಚಬಲ್ಲರು ಎಂದು ಹೇಳಿತು.







