ಪ್ರಮೋದ್ ಪಕ್ಷಾಂತದಿಂದ ಪಕ್ಷಕ್ಕೆ ಹಾನಿ ಇಲ್ಲ: ಪ್ರಸಾದ್ ರಾಜ್
ಉಡುಪಿ : ವೈಯಕ್ತಿಕ ಕಾರಣಗಳಿಗಾಗಿ ಬಿಜೆಪಿ ಪಕ್ಷ ಸೇರಿರುವ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಪಕ್ಷಾಂತರದಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಹಾನಿ ಇಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತ ಹಾಗೂ ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಹೇಳಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 130ಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷವನ್ನು ಪ್ರಮೋದ್ ಮಧ್ವರಾಜ್ ತೊರೆದಿರುವುದು ಅವರ ವೈಯಕ್ತಿಕ ವಿಚಾರ. ಇದರಿಂದ ಕಾಂಗ್ರೆಸ್‌ಗೆ ಯಾವುದೇ ನಷ್ಟವಾಗಲೀ, ಹಾನಿಯಾಗಲಿ ಇರುವುದಿಲ್ಲ ಎಂದವರು ನುಡಿದರು.
2018ರ ವಿಧಾನಸಭಾ ಚುನಾವಣೆಯಲ್ಲಿ ಸಚಿವರಾಗಿದ್ದೂ ಸೋತ ಬಳಿಕ ಅವರ ಜನಪ್ರಿಯತೆ ಕುಸಿದಿತ್ತು. ಆ ಬಳಿಕ ಅವರು ಪಕ್ಷದ ಕಾರ್ಯಕರ್ತ ರೊಂದಿಗೆ ಸಂಪರ್ಕವನ್ನು ಹೆಚ್ಚುಕಮ್ಮಿ ಕಳೆದುಕೊಂಡಿದ್ದರು. ಹೀಗಾಗಿ ಈಗ ಪಕ್ಷಾಂತರಗೊಂಡಿರುವುದರಿಂದ ಪಕ್ಷಕ್ಕೇನೂ ಹಾನಿಯಾಗದು. ಬದಲಿಗೆ ಅವರು ಪಕ್ಷ ತ್ಯಜಿಸಿರುವುದರಿಂದ ಹೊಸಬರಿಗೆ ಅವಕಾಶದ ಬಾಗಿಲು ತೆರೆದಂತಾಗಿದೆ ಎಂದು ಪ್ರಸಾದ್‌ರಾಜ್ ಅಭಿಪ್ರಾಯಪಟ್ಟರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹೊಸಬರಿಗೆ, ಮಹಿಳೆಯರಿಗೆ, ಹಿಂದುಳಿದ ವರ್ಗದವರಿಗೆ ಹಾಗೂ ಯುವಕರಿಗೆ ಅವಕಾಶ ನೀಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅವಕಾಶ ನೀಡಿದರೆ, ಪಕ್ಷದ ಕಾರ್ಯಕರ್ತರು ಬೆಂಬಲ ಸೂಚಿಸಿದರೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳು ವುದಾಗಿ ಅವರು ತಿಳಿಸಿದರು.
ಸದ್ಯ ಪಕ್ಷಕ್ಕಾಗಿ ದುಡಿಯುತ್ತಿರುವ ಕಾರ್ಯಕರ್ತರನ್ನು ಹುರಿದುಂಬಿಸಬೇಕಿದೆ. ಪಕ್ಷದಲ್ಲಿ ನಾಯಕರ ಕೊರತೆ ಇಲ್ಲ ಎಂಬುದನ್ನು ಅವರಿಗೆ ಮನದಟ್ಟು ಮಾಡಬೇಕಾಗಿದೆ. ಪಕ್ಷದಲ್ಲಿ ಎಲ್ಲರಿಗೂ ಹಿಂದಿನಂತೆಯೇ ಗೌರವ ಸಿಗುತ್ತದೆ ಎಂಬ ಭರವಸೆಯನ್ನು ಕಾರ್ಯಕರ್ತರಲ್ಲಿ ತುಂಬಬೇಕಿದೆ ಎಂದು ಪ್ರಸಾದ್ ರಾಜ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಜಿಪಂ ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ, ಬಡಗುಬೆಟ್ಟು ಗ್ರಾಪಂನ ಮಾಜಿ ಅಧ್ಯಕ್ಷ ಸಂಜೀವ ಸಾಲ್ಯಾನ್, ಚಾಂತಾರು ಗ್ರಾಪಂ ಸದಸ್ಯ ಪ್ರದೀಪ್ ಪೂಜಾರಿ ಉಪಸ್ಥಿತರಿದ್ದರು.