ಶ್ರೀಲಂಕಾ: ಆಡಳಿತ ವಿರೋಧಿ ಘರ್ಷಣೆ; ಹಿಂಸಾಚಾರದಲ್ಲಿ ಸಂಸದ ಮೃತ್ಯು

ಕೊಲಂಬೋ: ಶ್ರೀಲಂಕಾದ ವಿವಿಧ ಭಾಗಗಳಲ್ಲಿ ಭುಗಿಲೆದ್ದ ಸರಕಾರದ ಪರ ಹಾಗೂ ವಿರೋಧಿ ಪ್ರತಿಭಟನಕಾರರ ನಡುವಿನ ಘರ್ಷಣೆ ಬಳಿಕ ಶ್ರೀಲಂಕಾದ ಆಡಳಿತಾರೂಢ ಪಕ್ಷದ ಸಂಸದ ಸೋಮವಾರ ಮೃತಪಟ್ಟಿದ್ದಾರೆ. ಶ್ರೀಲಂಕಾದಾದ್ಯಂತ ಹರಡಿದ ಘರ್ಷಣೆಯಲ್ಲಿ ಸಂಸದ ಪಿ. ಅಮರಕೀರ್ತಿ ಅತುಕೊರಾಲಾ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಪೊಲೀಸರು ದೃಢಪಡಿಸಿದ್ದಾರೆ.
ಈ ಘರ್ಷಣೆಯಲ್ಲಿ 130ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಕೊಲೊಂಬೊ-ಕಾಂಡಿ ಹೆದ್ದಾರಿಯಲ್ಲಿರುವ ನಿಟ್ಟಂಬುವಾ ಪಟ್ಟಣದಲ್ಲಿ ತನ್ನ ಕಾರನ್ನು ತಡೆ ಹಿಡಿದ ಪ್ರತಿಭಟನಕಾರರ ಮೇಲೆ ಅತುಕೊರಾಲಾ ಗುಂಡು ಹಾರಿಸಿದ್ದರು. ಇದರ ಪರಿಣಾಮ ಇಬ್ಬರು ಗಾಯಗೊಂಡಿದ್ದರು. ಬಳಿಕ ಅತುಕೊರಾಲಾ ಸಮೀಪದ ಕಟ್ಟಡದಲ್ಲಿ ಆಶ್ರಯ ಪಡೆದುಕೊಳ್ಳಲು ಪ್ರಯತ್ನಿಸಿದ್ದರು. ಆದರೆ, ಅವರು ಶವವಾಗಿ ಪತ್ತೆಯಾಗಿದ್ದಾರೆ
ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರು ದೇಶವು ತನ್ನ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ಒತ್ತಡದ ನಡುವೆ ಅಂತಿಮವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಿಟಿಐ ವರದಿಯ ಪ್ರಕಾರ, ಪ್ರಧಾನಿ ರಾಜಪಕ್ಸೆ ಹೊರತುಪಡಿಸಿ, ಕನಿಷ್ಠ ಇನ್ನೂ ಇಬ್ಬರು ಕ್ಯಾಬಿನೆಟ್ ಸಚಿವರು ರಾಜೀನಾಮೆ ನೀಡಿದ್ದಾರೆ. ಮಹಿಂದ ರಾಜಪಕ್ಸೆ ಸಂಪೂರ್ಣ ಕ್ಯಾಬಿನೆಟ್ ಒಂದೊಂದಾಗಿ ರಾಜೀನಾಮೆ ನೀಡಲಿದೆ ಎಂದು ಹೇಳಲಾಗಿದೆ.
ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರ ಕಚೇರಿಯ ಹೊರಗೆ ಅವರ ಬೆಂಬಲಿಗರು ಸರ್ಕಾರಿ ವಿರೋಧಿ ಪ್ರತಿಭಟನಾಕಾರರ ಮೇಲೆ ದಾಳಿ ಮಾಡಿದ ಗಂಟೆಗಳ ನಂತರ ಮಹಿಂದಾ ರಾಜಪಕ್ಸೆ ಅವರ ನಿರ್ಧಾರವು ಹೊರಬಿದ್ದಿದೆ.







