ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಬ್ಬರು ಪೆಲೆಸ್ತೀನಿಯರ ಹತ್ಯೆಗೈದ ಇಸ್ರೇಲ್ ಸೇನೆ

REUTERS
ಜೆರುಸಲೇಂ, ಮೇ 9: ಆಕ್ರಮಿತ ಪಶ್ಚಿಮ ದಂಡೆಯಲ್ಲಿ ರವಿವಾರ ನಡೆದ ಪ್ರತ್ಯೇಕ ಘಟನೆಯಲ್ಲಿ ಇಸ್ರೇಲ್ ಸೇನೆಯ ಗುಂಡಿನ ದಾಳಿಯಲ್ಲಿ ಇಬ್ಬರು ಪೆಲೆಸ್ತೀನಿಯರು ಹತರಾಗಿದ್ದಾರೆ ಎಂದು ವರದಿಯಾಗಿದೆ.
ಕಳೆದ ವಾರ ಇಸ್ರೇಲ್ನಲ್ಲಿ ಮೂವರು ಇಸ್ರೇಲ್ ನಾಗರಿಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮದಂಡೆಯಲ್ಲಿ ಕಾರ್ಯಾಚರಣೆ ನಡೆಸಿದ ಇಸ್ರೇಲ್ ಪಡೆ ಇಬ್ಬರು ಪೆಲೆಸ್ತೀನ್ ವ್ಯಕ್ತಿಗಳನ್ನು ಶಂಕಿತ ಆರೋಪಿಗಳೆಂದು ವಶಕ್ಕೆ ಪಡೆದ ಕೆಲ ಗಂಟೆಗಳ ಬಳಿಕ ನಡೆದ ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಪೆಲೆಸ್ತೀನಿಯನ್ ಪ್ರಜೆಗಳು ಇಸ್ರೇಲ್ ಯೋಧರ ಗುಂಡೇಟಿನಿಂದ ಮೃತಪಟ್ಟಿದ್ದಾರೆ ಎಂದು ಪೆಲೆಸ್ತೀನ್ ಆರೋಗ್ಯ ಇಲಾಖೆ ಹೇಳಿದೆ.ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ಪೊಲೀಸರ ಚೆಕ್ ಪೋಸ್ಟ್ ಗೆ ಮಾರಕ ಆಯುಧಗಳೊಂದಿಗೆ ನುಗ್ಗಲು ಯತ್ನಿಸಿದ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮತ್ತೊಂದು ಪ್ರಕರಣದಲ್ಲಿ, ಗಾಯಗೊಂಡ ಇಸ್ರೇಲ್ ಪೊಲೀಸ್ ಮೇಲೆ ಚೂರಿಯಿಂದ ದಾಳಿ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಗುಂಡಿಕ್ಕಿ ಸಾಯಿಸಲಾಗಿದೆ ಎಂದು ಇಸ್ರೇಲ್ ಪೊಲೀಸರು ಹೇಳಿದ್ದಾರೆ.





