ಕೆಎಸಾರ್ಟಿಸಿ ಬಸ್ ಅಪಘಾತ: ಸ್ಪಷ್ಟನೆ ನೀಡಿದ ನಿಗಮ

ಬೆಂಗಳೂರು, ಮೇ 9: ಕೆಎಸ್ಸಾರ್ಟಿಸಿ ಬಸ್ ಕೆಂಗೇರಿ ದಾಟಿ, ಬೆಂಗಳೂರು ಯುನಿವರ್ಸಿಟಿ ಬಳಿ ಬರುತ್ತಿದ್ದಾಗ ಚಾಲಕರಿಗೆ ಸ್ಟೀರಿಂಗ್ ನಿಯಂತ್ರಣ ತಪ್ಪಿದೆ. ಇದರಿಂದಾಗಿ ವಾಹನವನ್ನು ಚಾಲಕರು ನಿಯಂತ್ರಣಕ್ಕೆ ತೆಗೆದುಕೊಳ್ಳಲು ವಿಫಲರಾಗಿದ್ದು, ಬಲಭಾಗದ ವಿಭಜಕಕ್ಕೆ ಢಿಕ್ಕಿಯಾಗಿ, ನಮ್ಮ ಮೆಟ್ರೋ ಪಿಲ್ಲರ್ ಸಂಖ್ಯೆ 546ಕ್ಕೆ ಗುದ್ದಿ ವಾಹನವು ನಿಂತಿರುತ್ತದೆ. ವಾಹನವು ಪಿಲ್ಲರ್‍ಗೆ ಗುದ್ದಿರುವ ರಭಸಕ್ಕೆ ವಾಹನದ ಛಾಸ್ಸಿ ಬೆಂಡ್ ಆಗಿದ್ದು, ಪ್ರಯಾಣಿಕರ ಅಸನಗಳ ಫ್ರೇಂಗಳಿಗೆ ಹೊಡೆತ ಬಿದ್ದ ಕಾರಣ ಹೆಚ್ಚಿನ ಪ್ರಯಾಣಿಕರಿಗೆ ಗಾಯಗಳಾಗಿರುತ್ತದೆ ಎಂದು ಕೆಎಸ್ಸಾರ್ಟಿಸಿ ಪ್ರಕಟನೆಯಲ್ಲಿ ಮಾಹಿತಿ ನೀಡಿದೆ.
ಬಸ್‍ನಲ್ಲಿ 45 ಪ್ರಯಾಣಿಕರು ಸಂಚರಿಸುತ್ತಿದ್ದು, ಅಪಘಾತದಲ್ಲಿ ಚಾಲಕ, ನಿರ್ವಾಹಕರು ಸೇರಿದಂತೆ 26 ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ. ಅವರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ.
ಸುಪ್ರಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ 12 ಪ್ರಯಾಣಿಕರ ಪೈಕಿ 5 ಜನ ಪ್ರಯಾಣಿಕರಿಗೆ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ವೈದ್ಯರು ತಿಳಿಸಿರುತ್ತಾರೆ. ಉಳಿದ 7 ಜನ ಪ್ರಯಾಣಿಕರಿಗೆ ಆಸ್ಪತ್ರೆಯ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪಿನಾಕಲ್ ಆಸ್ಪತ್ರೆಯಲ್ಲಿರುವ 6 ಜನ ಪ್ರಯಾಣಿಕರ ಪೈಕಿ ಒಬ್ಬರಿಗೆ 10,800 ರೂ. 3 ಜನ ಪ್ರಯಾಣಿಕರಿಗೆ ತಲಾ 5,000 ರೂ., ಮತ್ತು ಉಳಿದ ಇಬ್ಬರು ಪ್ರಯಾಣಿಕರಿಗೆ ತಲಾ 3,000 ರೂ.ಗಳನ್ನು ಚಿಕಿತ್ಸಾ ವೆಚ್ಚವಾಗಿ ನೀಡಲಾಗಿದ್ದು, ಎಲ್ಲಾ ಪ್ರಯಾಣಿಕರೂ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುತ್ತಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ 6 ಜನ ಪ್ರಯಾಣಿಕರು ಹೊರ ರೋಗಿಯಾಗಿ ಚಿಕಿತ್ಸೆ ಪಡೆದು ಹೋಗಿದ್ದು, ಉಳಿದ 2 ಜನ ಪ್ರಯಾಣಿಕರಿಗೆ ತಲಾ 5,000 ರೂ. ಚಿಕಿತ್ಸಾ ವೆಚ್ಚ ಪಾವತಿಸಲಾಗಿರುತ್ತದೆ.
ನಿಗಮದ ಹಿರಿಯ ಅಧಿಕಾರಿಗಳು ಹಾಗೂ ಇತರೆ ಸಿಬ್ಬಂದಿಗಳು ಎಲ್ಲಾ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದು, ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸುವ ಕೆಲಸ ಮಾಡಿರುತ್ತಾರೆ. ಆಸ್ಪತ್ರೆಗೆ ದಾಖಲಾಗಿರುವ ಎಲ್ಲಾ ಪ್ರಯಾಣಿಕರ ಪೂರ್ಣ ಚಿಕಿತ್ಸಾ ವೆಚ್ಚವನ್ನು ನಿಗಮದ ವತಿಯಿಂದ ಭರಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.







