ದಾನಿಷ್ ಸಿದ್ದಿಕಿ ಸೇರಿದಂತೆ ನಾಲ್ವರು ಭಾರತೀಯರಿಗೆ ಪುಲಿಟ್ಝರ್ ಪ್ರಶಸ್ತಿ

ದಾನಿಷ್ ಸಿದ್ದಿಕಿ
ಹೊಸದಿಲ್ಲಿ : ಅಫ್ಘಾನಿಸ್ತಾನ ಯುದ್ಧದ ಸಂದರ್ಭದಲ್ಲಿ ಹತ್ಯೆಯಾದ ಭಾರತದ ರಾಯ್ಟರ್ ಛಾಯಾಗ್ರಾಹಕ ದಾನಿಷ್ ಸಿದ್ದಿಕಿ ಸೇರಿದಂತೆ ನಾಲ್ವರು ಭಾರತೀಯರು ಛಾಯಾಗ್ರಹಣ ವಿಭಾಗದಲ್ಲಿ 2022 ರ ಪ್ರತಿಷ್ಠಿತ ಪುಲಿಟ್ಝರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅವರ ಸಹೋದ್ಯೋಗಿಗಳಾದ ಅದ್ನನ್ ಅಬಿದಿ, ಸನ್ನಾ ಇರ್ಷಾದ್ ಮಟ್ಟೂ ಮತ್ತು ಅಮಿತ್ ದವೆ ಅವರು ಭಾರತದಲ್ಲಿ ಕೋವಿಡ್-9 ಸಾಂಕ್ರಾಮಿಕದ ಸಾವು ನೋವಿನ ಫೋಟೊಗಳಿಗಾಗಿ ಪ್ರಶಸ್ತಿ ಪಡೆದಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ನಡೆಸಿದ ಅತಿಕ್ರಮಣವನ್ನು ವಸ್ತುನಿಷ್ಠವಾಗಿ ವರದಿ ಮಾಡುವಲ್ಲಿ ಉಕ್ರೇನ್ ಪತ್ರಕರ್ತರು ತೋರಿದ ಧೈರ್ಯ, ತಾಳ್ಮೆ ಮತ್ತು ಬದ್ಧತೆಯನ್ನು ಪುಲಿಟ್ಝರ್ ಪ್ರಶಸ್ತಿ ಮಂಡಳಿ ಗುರುತಿಸಿದೆ. ಜತೆಗೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು 2021ರ ಜನವರಿ 6ರಂದು ವಾಷಿಂಗ್ಟನ್ ನಲ್ಲಿರುವ ಸಂಸತ್ ಭವನದ ಮೇಲೆ ದಾಳಿ ನಡೆಸಿದ ಘಟನೆಯ ಕುರಿತ ವರದಿಗಾರಿಕೆಗಾಗಿ ವಾಷಿಂಗ್ಟನ್ ಪೋಸ್ಟ್ ಗೆ ಕೂಡಾ ಪ್ರತಿಷ್ಠಿತ ಪುಲಿಟ್ಝರ್ ಪ್ರಶಸ್ತಿ ಸಂದಿದೆ.
ಉಕ್ರೇನ್ ಪತ್ರಕರ್ತರಿಗೆ ವಿಶೇಷ ಪ್ರಶಸ್ತಿ ಫಲಕ ನೀಡಲಾಗುತ್ತಿದೆ ಎಂದು ಪ್ರಶಸ್ತಿ ಸಮಿತಿಯ ಮರ್ಜೋರ್ ಮಿಲ್ಲರ್ ಹೇಳಿದ್ದಾರೆ. ಸಾರ್ವಜನಿಕ ಸೇವಾ ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಾಷಿಂಗ್ಟನ್ ಪೋಸ್ಟ್ ಗೆ ಪುಲಿಟ್ಝರ್ ಪ್ರಶಸ್ತಿ ಗೌರವ ಸಂದಿದೆ.
ಸುದ್ದಿ ವಿಭಾಗದ ಮೂರು ಪ್ರಶಸ್ತಿಗಳು 'ನ್ಯೂಯಾರ್ಕ್ ಟೈಮ್ಸ್'ಗೆ ಬಂದಿವೆ. ಮಧ್ಯಪ್ರಾಚ್ಯದಲ್ಲಿ ಅಮೆರಿಕನ್ ದಾಳಿಯ ಸಂದರ್ಭದಲ್ಲಿ ಸಂಭವಿಸಿದ ನಾಗರಿಕ ಸಾವು ನೋವುಗಳ ವರದಿಗಾಗಿ 'ನ್ಯೂಯಾರ್ಕ್ ಟೈಮ್ಸ್'ಗೆ ಅಂತರರಾಷ್ಟ್ರೀಯ ಪ್ರಶಸ್ತಿ ನೀಡಲಾಗಿದೆ. ಅಮೆರಿಕದ ಮಾರಕ ಸಂಚಾರ ನಿಲುಗಡೆ ಕುರಿತ ತನಿಖಾ ವರದಿಗಾಗಿ ರಾಷ್ಟ್ರೀಯ ಪ್ರಶಸ್ತಿಗೂ ಇದು ಪಾತ್ರವಾಗಿದೆ.







