1,500 ಕೈದಿಗಳಿಗೆ ಜಾಮೀನು ಭಾಗ್ಯ ಸನ್ನಿಹಿತ: ಸುಪ್ರೀಂಕೋರ್ಟ್

ಹೊಸದಿಲ್ಲಿ: ಉತ್ತರ ಪ್ರದೇಶದ ಜೈಲುಗಳಲ್ಲಿ ಹತ್ತು ವರ್ಷಗಳಿಂದ ಬಂಧಿಯಾಗಿರುವ ಕೈದಿಗಳಿಗೆ ಜಾಮೀನು ಸಿಗುವ ಕಾಲ ಸನ್ನಿಹಿತವಾಗಿದೆ.
1980ರ ದಶಕದಲ್ಲೇ ಮಾಡಿದ ಮೇಲ್ಮನವಿಗಳು ಅಲಹಾಬಾದ್ ಹೈಕೋರ್ಟ್‍ನಲ್ಲಿ ವಿಚಾರಣೆಗೆ ಕಾಯುತ್ತಿರು ವುದನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂಕೋರ್ಟ್ ಸೋಮವಾರ, ಒಂದು ಬಾರಿಯ ಅಪರಾಧಿಗಳು ಮತ್ತು 10 ವರ್ಷಕ್ಕಿಂತ ಹೆಚ್ಚು ಅವಧಿಗೆ ಜೈಲುವಾಸ ಅನುಭವಿಸುತ್ತಿರುವ ಕೈದಿಗಳಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಆದೇಶಿಸಿದೆ.
1561 ಮಂದಿ ಆರೋಪಿಗಳು ವಿವಿಧ ಜೈಲುಗಳಲ್ಲಿ ಹತ್ತು ವರ್ಷಗಳಿಗೂ ಅಧಿಕ ಕಾಲದಿಂದ ಇದ್ದು, ಅವರ ಜಾಮೀನು ಅರ್ಜಿಗಳು ಶೀಘ್ರ ಇತ್ಯರ್ಥವಾಗುವುದು ಅಸಾಧ್ಯ ಎನಿಸಿದ ಹಿನ್ನೆಲೆಯಲ್ಲಿ, ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ನ್ಯಾಯಮೂರ್ತಿ ಎಂ.ಎಂ.ಸುಂದರೇಶ್ ಅವರು, ಇವರ ಪ್ರಕರಣಗಳನ್ನು ಜತೆಗೂಡಿಸಿ ಅವರೆಲ್ಲರಿಗೆ ಜಾಮೀನು ಮಂಜೂರು ಮಾಡುವ ಏಕೈಕ ಆದೇಶ ಹೊರಡಿಸುವಂತೆ ಸೂಚಿಸಿದರು.
ಈ ಕೈದಿಗಳ ಉಪಶಮನ ಮನವಿಗಳನ್ನು ಪರಿಗಣಿಸುವಂತೆಯೂ ಉತ್ತರ ಪ್ರದೇಶ ಸರ್ಕಾರಕ್ಕೆ ಸಲಹೆ ಮಾಡಿದೆ. ನ್ಯಾಯಾಲಯಕ್ಕೆ ಸಲ್ಲಿಸಿದ ಅಂಕಿ ಅಂಶಗಳ ಪ್ರಕಾರ, 727 ಕೈದಿಗಳು 14ಕ್ಕೂ ಹೆಚ್ಚು ವರ್ಷಗಳಿಂದ ಜೈಲುವಾಸ ಅನುಭವಿಸುತ್ತಿದ್ದು, 834 ಕೈದಿಗಳು 10-14 ವರ್ಷ ಸೆರೆಮನೆ ವಾಸದಲ್ಲಿದ್ದಾರೆ.
ಇಂಥ ಪ್ರಕರಣಗಳಲ್ಲಿ ರಾಜ್ಯ ಸರ್ಕಾರದ ನಿಲುವನ್ನು ಕೇಳಿ, ಒಂದು ಬಾರಿಯ ಅಪರಾಧದ ಪ್ರಕರಣಗಳನ್ನು ಹಾಗೂ 10 ವರ್ಷಕ್ಕಿಂತ ಅಧಿಕ ಅವಧಿಗೆ ಜೈಲಿನಲ್ಲಿರುವವರ ಪ್ರಕರಣಗಳನ್ನು ಏಕೆ ಇತ್ಯರ್ಥಪಡಿಸಿಲ್ಲ ಎನ್ನುವುದು ಅರ್ಥವಾಗುತ್ತಿಲ್ಲ, ಕೆಲ ವಿಶೇಷ ಪ್ರಕರಣಗಳನ್ನು ಹೊರತುಪಡಿಸಿ ಉಳಿದೆಲ್ಲ ಪ್ರಕರಣಗಳಲ್ಲಿ ಜಾಮೀನು ಪಡೆಯಬಹುದು. ಉಪಶಮನದ ಮಾನದಂಡಕ್ಕೆ ಅನುಗುಣವಾಗಿರುವ ಪ್ರಕರಣಗಳನ್ನು ರಾಜ್ಯ ಸರ್ಕಾರ ಪರಿಗಣಿಸಬೇಕು ಎಂದು ಸುಪ್ರೀಂಕೋರ್ಟ್ ಪೀಠ ಸೂಚಿಸಿದೆ.
ದೊಡ್ಡ ಪ್ರಮಾಣದ ಪ್ರಕರಣಗಳು ಬಾಕಿ ಇವೆ ಎಂಬ ಕಾರಣಕ್ಕೆ ಕೈದಿಗಳ ಮೇಲ್ಮನವಿಗಳು ವಿಚಾರಣೆಯಾಗದೇ ಅವರು ಜೈಲಿನಲ್ಲಿ ಕಳೆಯಬೇಕಾಗಿ ಬಂದಿರುವುದು ಆತಂಕಕಾರಿ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.







