ಉತ್ತರಪ್ರದೇಶ: ಯುವತಿಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರಗೈದು ಮಾರಾಟ

ಹೊಸದಿಲ್ಲಿ: ತನ್ನ ಮದುವೆಯ ಆಮಂತ್ರಣ ಪತ್ರಿಕೆಗಳನ್ನು ಹಂಚಲು ಹೋಗುತ್ತಿದ್ದಾಗ ತನ್ನನ್ನು ಅಪಹರಿಸಿದ ಮೂವರು ವ್ಯಕ್ತಿಗಳು ಅತ್ಯಾಚಾರ ಎಸಗಿ ಮಾರಾಟ ಮಾಡಿದ್ದಾರೆ ಎಂದು 18ರ ಹರೆಯದ ಯುವತಿಯೊಬ್ಬಳು ಆರೋಪಿಸಿದ್ದಾರೆ.
ಆರೋಪಿಗಳು ತನ್ನನ್ನು ರಾಜಕೀಯ ಪಕ್ಷದ ನಾಯಕರೊಬ್ಬರ ಬಳಿಗೆ ಕರೆದೊಯ್ದರು. ನಂತರ ಮಧ್ಯಪ್ರದೇಶದ ಪಕ್ಕದ ದಾತಿಯಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಬೇರೊಬ್ಬರೊಂದಿಗೆ ಇರುವಂತೆ ಒತ್ತಾಯಿಸಿದರು ಎಂದು ಮಹಿಳೆ ಆರೋಪಿಸಿದ್ದಾರೆ ಎಂದು ಝಾನ್ಸಿ ಜಿಲ್ಲೆಯ ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಎಪ್ರಿಲ್ 21 ರಂದು ನಡೆಯಲಿರುವ ತನ್ನ ಮದುವೆಯ ಕಾರ್ಡ್‌ಗಳನ್ನು ವಿತರಿಸಲು ಹೋದಾಗ ಗ್ರಾಮದ ಮೂವರು ಯುವಕರು ಎಪ್ರಿಲ್ 18 ರಂದು ತನ್ನನ್ನು ಅಪಹರಿಸಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಕೆಲವು ದಿನಗಳ ಕಾಲ ಬೇರೆ ಬೇರೆ ಸ್ಥಳಗಳಲ್ಲಿ ತನ್ನನ್ನು ಇರಿಸಿಕೊಂಡು ನಂತರ ಕೆಲವು ದಿನ ಝಾನ್ಸಿಯಲ್ಲಿ ತನ್ನನ್ನು ಕೂಡಿಟ್ಟಿದ್ದರು. ಬಳಿಕ ತನ್ನ ಇಚ್ಛೆಗೆ ವಿರುದ್ಧವಾಗಿ ಬೇರೊಬ್ಬರೊಂದಿಗೆ ಇರಲು ಮಧ್ಯಪ್ರದೇಶದ ದಾತಿಯಾ ಗ್ರಾಮಕ್ಕೆ ಕಳುಹಿಸಲಾಯಿತು ಎಂದು ಮಹಿಳೆ ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನನ್ನು ಅಪಹರಿಸಿ, ಅತ್ಯಾಚಾರ ಮಾಡಿ ಮಾರಾಟ ಮಾಡಿದ ಆರೋಪದ ಮೇಲೆ ಕೆಲವರ ವಿರುದ್ಧ ಮಹಿಳೆ ನೀಡಿದ ದೂರಿನ ಮೇರೆಗೆ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, ಮ್ಯಾಜಿಸ್ಟ್ರೇಟ್ ಮುಂದೆ ಆಕೆಯ ಹೇಳಿಕೆಯನ್ನು ದಾಖಲಿಸಿ ಕೊಳ್ಳಲಾಗಿದೆ ಎಂದು ತೆಹ್ರಾಲಿ ಸರ್ಕಲ್ ಆಫೀಸರ್ (ಸಿಒ) ಅನುಜ್ ಸಿಂಗ್ ತಿಳಿಸಿದ್ದಾರೆ.







