ಮೇ 13ರಂದು ‘ರಾಣಿ ಅಬ್ಬಕ್ಕ ಪ್ರತಿಮೆ’ ಅನಾವರಣ
ಮಂಗಳೂರು : ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯದಲ್ಲಿ ನೂತನವಾಗಿ ನಿರ್ಮಿಸಿರುವ ಐದೂವರೆ ಅಡಿ ಎತ್ತರದ ‘ರಾಣಿ ಅಬ್ಬಕ್ಕ ಪ್ರತಿಮೆ’ ಇದರ ಅನಾವರಣ ಸಮಾರಂಭ ಮೇ 13ರಂದು ಸಂಜೆ 4 ಗಂಟೆಗೆ ಸಂಚಯಗಿರಿಯ ಚಂದ್ರಮ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ.
ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಎನ್.ಸಂತೋಷ್ ಹೆಗ್ಡೆ ಪ್ರತಿಮೆ ಅನಾವರಣ ಮಾಡುವರು. ಶ್ರೀ ಕ್ಷೇತ್ರ ಧರ್ಮಸ್ಥಳದ ಅನಿತಾ ಸುರೇಂದ್ರ ಕುಮಾರ್, ಮೂಡಬಿದಿರೆ ಚೌಟರ ಅರಮನೆಯ ಎಂ.ಕುಲದೀಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಮಾರಂಭದ ಅಧ್ಯಕ್ಷತೆಯನ್ನು ಏರ್ಯ ಬಾಲಕೃಷ್ಣ ಹೆಗ್ಗಡೆ ವಹಿಸಲಿದ್ದಾರೆ ಎಂದು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕಾರಾಮ ಪೂಜಾರಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶ್ರಮಜೀವಿಗಳ ಏಳಿಗೆಗಾಗಿ ನಿತ್ಯ ನಿರಂತರವೆಂಬಂತೆ ದುಡಿಯುತ್ತಿದ್ದ, ಸರಳ ಸಾತ್ವಿಕ ಸ್ವಭಾವದ ವೀರ ಮಹಿಳೆ ರಾಣಿ ಅಬ್ಬಕ್ಕಳ ಹೆಸರು ಮತ್ತು ಆಕೆಯ ಸಾಧನೆಯನ್ನು ಜಗತ್ತಿಗೆ ಸಾರುವ ಕೆಲಸ ನಿರಂತವಾಗಿ ನಡೆಯುತ್ತಿದೆ. ಆಕೆಯ ಪ್ರತಿಮೆಯೊಂದು ನಿರ್ಮಾಣವಾಗಬೇಕೆಂಬ ಕನಸು ಈಡೇರಿದೆ. ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಪನ್ಮೂಲ ಕೇಂದ್ರವಾಗಿ ಬೆಳೆಯುತ್ತಿದೆ. ಹೊಸ ಶಿಕ್ಷಣ ನೀತಿಯ ಪ್ರಕಾರ ಪ್ರಾದೇಶಿಕ ಇತಿಹಾಸಕ್ಕೆ ಮುಖ್ಯವಾಗಿ ಮೌಖಿಕ ಚರಿತ್ರೆಗೆ ಒತ್ತು ನೀಡಿರುವುದು ಖುಷಿಯ ವಿಚಾರ ಎಂದು ಡಾ.ತುಕಾರಾಮ ಪೂಜಾರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಡಾ.ಆಶಾಲತಾ ಎಸ್.ಸುವರ್ಣ, ಸುರೇಶ್ ಬಂಗೇರಾ, ಡಾ. ಪೀಟರ್ ವಿಲ್ಸನ್ ಪ್ರಭಾಕರ್, ಡಾ.ಸಾಯೀಗೀತ ಉಪಸ್ಥಿತರಿದ್ದರು.