ಮಹಿಂದಾ ರಾಜಪಕ್ಸ ಕುಟುಂಬ ನೌಕಾನೆಲೆಗೆ ಪಲಾಯನ: ಪ್ರತಿಭಟನಾಕಾರರ ಮುತ್ತಿಗೆ

AP Photo
ಕೊಲಂಬೊ, ಮೇ 10: ವ್ಯಾಪಕ ಪ್ರತಿಭಟನೆಗೆ ಮಣಿದು ಸೋಮವಾರ ಶ್ರೀಲಂಕಾದ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಹಿಂದಾ ರಾಜಪಕ್ಸ ತಮ್ಮ ಕುಟುಂಬ ಸದಸ್ಯರ ಸಹಿತ ಈಶಾನ್ಯ ಭಾಗದ ಟ್ರಿಂಕೊಮಲಿಯ ನೌಕಾನೆಲೆಗೆ ಪಲಾಯನ ಮಾಡಿ ಆಶ್ರಯ ಪಡೆದಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್ಡಿಟಿವಿ ವರದಿ ಮಾಡಿದೆ.
ಮಾಜಿ ಪ್ರಧಾನಿ ಮತ್ತವರ ಕುಟುಂಬ ಹೆಲಿಕಾಪ್ಟರ್ ಮೂಲಕ ಟ್ರಿಂಕೊಮಲಿ ನೌಕಾನೆಲೆಗೆ ತೆರಳಿದ್ದಾರೆ. ನೌಕಾನೆಲೆಯಲ್ಲಿ ಮಹಿಂದಾ ಕುಟುಂಬ ಆಶ್ರಯ ಪಡೆದಿರುವ ಮಾಹಿತಿ ಲಭಿಸುತ್ತಿದ್ದಂತೆಯೇ ಪ್ರತಿಭಟನಾಕಾರರು ನೌಕಾನೆಲೆಯನ್ನು ಸುತ್ತುವರಿದು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಜನರ ತೀವ್ರ ಆಕ್ರೋಶದಿಂದ ಒತ್ತಡಕ್ಕೆ ಒಳಗಾದ ಮಹಿಂದಾ ರಾಜಪಕ್ಸ ಸೋಮವಾರ ರಾಜೀನಾಮೆ ಘೋಷಿಸಿದರೂ ಅವರ ವಿರುದ್ಧದ ಆಕ್ರೋಶ ಕಡಿಮೆಯಾಗಿಲ್ಲ. ಕೊಲಂಬೊದಲ್ಲಿ ಮಹಿಂದಾ ಅವರ ಸರಕಾರಿ ನಿವಾಸಕ್ಕೆ ಸೋಮವಾರ ರಾತ್ರಿ ಸಾವಿರಾರು ಪ್ರತಿಭಟನಾಕಾರರು ಮುತ್ತಿಗೆ ಹಾಕಿದ್ದರು. ಅವರ ನಿವಾಸದ ಆವರಣಕ್ಕೆ ಕನಿಷ್ಟ 10 ಪೆಟ್ರೋಲ್ ಬಾಂಬ್ ಎಸೆಯಲಾಗಿದೆ. ಮುತ್ತಿಗೆ ಹಾಕಿರುವ ಪ್ರತಿಭಟನಾಕಾರರನ್ನು ಅಶ್ರುವಾಯು ಸಿಡಿಸಿ ಮತ್ತು ಗಾಳಿಯಲ್ಲಿ ಗುಂಡು ಹಾರಿಸಿ ಪೊಲೀಸರು ಚದುರಿಸಿದರು. ಬಳಿಕ ಮಂಗಳವಾರ ಬೆಳಿಗ್ಗೆ ಕಾರ್ಯಾಚರಣೆ ನಡೆಸಿದ ಸೇನೆ ಮಹಿಂದಾ ಮತ್ತವರ ಕುಟುಂಬದವರನ್ನು ನಿವಾಸದಿಂದ ಸುರಕ್ಷತವಾಗಿ ಹೊರತಂದಿದೆ. ಅಲ್ಲಿಂದ ಸುಮಾರು 270 ಕಿಮೀ ದೂರದ ಟ್ರಿಂಕೊಮಲಿ ನೌಕಾನೆಲೆಗೆ ಮಹಿಂದಾ ಕುಟುಂಬ ತೆರಳಿದೆ ಎಂದು ಭದ್ರತಾ ಅಧಿಕಾರಿಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ. ಈ ಮಧ್ಯೆ, ತನ್ನ ನೇತೃತ್ವದಲ್ಲಿ ಸರ್ವಪಕ್ಷಗಳ ಪ್ರತಿನಿಧಿಗಳನ್ನು ಒಳಗೊಂಡಿರುವ ಮಧ್ಯಂತರ ಸರಕಾರ ರಚಿಸುವ ಅಧ್ಯಕ್ಷ ಗೊತಬಯ ರಾಜಪಕ್ಸರ ಪ್ರಸ್ತಾವನೆಯನ್ನು ಶ್ರೀಲಂಕಾದ ಪ್ರಮುಖ ವಿಪಕ್ಷ ಅಸೆಂಬ್ಲಿ ತಿರಸ್ಕರಿಸಿದ್ದು, ಅಧ್ಯಕ್ಷರ ರಾಜೀನಾಮೆಗೆ ಪಟ್ಟು ಹಿಡಿದಿದೆ.







