ನಾನು ಯಾವುದೇ ಬೇಡಿಕೆ ಇಟ್ಟಿಲ್ಲ, ಬಿಜೆಪಿ ಯಾವುದೇ ಭರವಸೆ ನೀಡಿಲ್ಲ: ಪ್ರಮೋದ್ ಮಧ್ವರಾಜ್

ಉಡುಪಿ : ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಳ್ಳುವಾಗ ನಾನಾಗಿ ಬಿಜೆಪಿ ಮುಂದೆ ಯಾವುದೇ ಬೇಡಿಕೆ ಇಟ್ಟಿಲ್ಲ. ಬಿಜೆಪಿ ನನಗೆ ಯಾವುದೇ ಭರವಸೆಗಳನ್ನು ನೀಡಿಲ್ಲ. ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದಲ್ಲಿ ನಾನು ಬಿಜೆಪಿಯಲ್ಲಿ ದುಡಿಯುತ್ತೇನೆ. 2023ರ ಚುನಾವಣೆಯಲ್ಲಿ ಪಕ್ಷ 150 ಸೀಟು ಗೆಲ್ಲಲು ನನ್ನ ಅಳಿಲು ಸೇವೆ ಮಾಡುತ್ತೇವೆ ಎಂದು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡ ಬಳಿಕ ಮೊದಲ ಬಾರಿ ನಗರಕ್ಕೆ ಆಗಮಿಸಿದ ಪ್ರಮೋದ್ ಮಧ್ವರಾಜ್, ಉಡುಪಿಯ ಹೊಟೇಲ್ ಕಿದಿಯೂರಿನಲ್ಲಿ ಇಂದು ನಡೆದ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಮಾವೇಶದ ಉದ್ಘಾಟನಾ ಸಮಾರಂಭ ಮುಗಿಸಿ ಹೊರಬಂದು ತನ್ನನ್ನು ಸುತ್ತುವರಿದ ನಗರದ ಪತ್ರಕರ್ತರೊಂದಿಗೆ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ, ಕೋವಿಡ್ ಸಂಕಷ್ಟವನ್ನು ಅವರು ನಿಭಾಯಿಸಿದ ಕಾರ್ಯವೈಖರಿಯನ್ನು ಮೆಚ್ಚಿ ನಾನು ಬಿಜೆಪಿಗೆ ಬಂದಿದ್ದೇನೆ. ಅದೇ ರೀತಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರಳ ಹಾಗೂ ಜನಸಾಮಾನ್ಯರಿಗೆ ಹತ್ತಿರವಾದ ಆಡಳಿತವೂ ನಾನು ಬಿಜೆಪಿ ಸೇರಲು ಕಾರಣಗಳಲ್ಲೊಂದು ಎಂದು ವಿವರಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಒಂದೆರಡು ಗಂಟೆಗಳಲ್ಲೇ ಬಿಜೆಪಿ ಪಕ್ಷವನ್ನು ಅಧಿಕೃತವಾಗಿ ಸೇರಿಕೊಂಡ ಪ್ರಮೋದ್, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಬಿ.ಎಲ್. ಸಂತೋಷ್ ಅವರ ಮೇಲೆ ವಿಶ್ವಾಸವಿಟ್ಟು ನಾನು ಬಿಜೆಪಿಗೆ ಸೇರ್ಪಡೆಗೊಂಡಿದ್ದೇನೆ ಎಂದರು.
ಕರ್ನಾಟಕದಲ್ಲಿ ಪಕ್ಷ ಎಲ್ಲಿ ಕೆಲಸ ಮಾಡಲು ಹೇಳುತ್ತದೆ ಅಲ್ಲಿಗೆ ಹೋಗಿ ಕೆಲಸ ಮಾಡುತ್ತೇನೆ. ವಿಶೇಷವಾಗಿ ಮೀನುಗಾರರು ಇರುವ ಕ್ಷೇತ್ರದಲ್ಲಿ ಕೆಲಸ ಮಾಡಲು ಇಷ್ಟಪಡುತ್ತೇನೆ. ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ನನ್ನ ಅಳಿಲ ಸೇವೆ ಮಾಡುತ್ತೇನೆ. ನನಗೆ ರಾಷ್ಟ್ರ ರಾಜಕಾರಣವಲ್ಲ, ರಾಜ್ಯ ರಾಜಕಾರಣವಲ್ಲ. ಹಳ್ಳಿಯ ರಾಜಕಾರಣ ಇಷ್ಟ. ಅದರ ಮೇಲೆ ನನಗೆ ಆಸಕ್ತಿ ಜಾಸ್ತಿ ಎಂದು ಪ್ರಮೋದ್ ನುಡಿದರು.
ಕಾಂಗ್ರೆಸ್ ಪಕ್ಷದಲ್ಲಿದ್ದಾಗ ತಾನು ನೀಡಿದ ಸಂದರ್ಶನವೊಂದರಲ್ಲಿ ಹೇಳಿದ ಮಾತುಗಳನ್ನೊಳಗೊಂಡ ವೀಡಿಯೊ ವೈರಲ್ ಆಗುತ್ತಿರುವ ಬಗ್ಗೆ ಅವರನ್ನು ಪ್ರಶ್ನಿಸಿದಾಗ, ಅದು 2018ರಲ್ಲಿ ನಡೆದ ಸಂದರ್ಶನ. ಆಗ ನಾನು ಸಿದ್ದರಾಮಯ್ಯ ಸರಕಾರದಲ್ಲಿ ಸಚಿವನಾಗಿದ್ದೆ. ಆಗ ನಾನು ಬಿಜೆಪಿ ಸೇರಿದ್ದರೆ, ಖಂಡಿತವಾಗಿ ಪಕ್ಷ ದ್ರೋಹಿಯಾಗುತಿದ್ದೆ ಎಂದ ಪ್ರಮೋದ್, ನಾನು ರಾಜೀನಾಮೆ ಪತ್ರದಲ್ಲಿ ಎಲ್ಲಾ ಮಾತುಗಳನ್ನು ಸ್ಪಷ್ಟವಾಗಿ ಹೇಳಿದ್ದೇನೆ ಎಂದರು.
ನಾವು ಒಂದು ಪಕ್ಷದಲ್ಲಿದ್ದಾಗ ಎದುರಾಳಿ ಪಕ್ಷವನ್ನು ಟೀಕಿಸುವುದು ನಮ್ಮ ಕರ್ತವ್ಯವಾಗಿರುತ್ತದೆ. ಹಿಂದೆ ಇಂದಿರಾಗಾಂಧಿ ವಿರುದ್ಧ ಟೀಕೆ ಮಾಡುತಿದ್ದ ವೀರೇಂದ್ರ ಪಾಟೀಲ್ ಅವರು ಎರಡನೇ ವರ್ಷಗಳಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡು ಕೇಂದ್ರದಲ್ಲಿ ಸಚಿವರಾಗಲಿಲ್ಲವೇ ಎಂದು ಪ್ರಶ್ನಿಸಿದ ಪ್ರಮೋದ್, ಅಂದಿನ ವೀಡಿಯೊಗಳನ್ನು ಇಂದು ಹರಿಯಬಿಡುವುದು ಎಷ್ಟು ಸಮಂಜಸ ಎಂದು ಅವರೇ ಚಿಂತನೆ ನಡೆಸಲಿ ಎಂದರು.
ನಾನು ಪಕ್ಷಕ್ಕಾಗಿ ದುಡಿದಿದ್ದೇನೆ. ಪಕ್ಷ ಕೂಡಾ ನನಗೆ ಹಲವಾರು ಅವಕಾಶಗಳನ್ನು ನೀಡಿದೆ ಎಂಬುದನ್ನು ಪತ್ರದಲ್ಲಿ ಸ್ಪಷ್ಟಪಡಿಸಿದ್ದೇನೆ. ಉಡುಪಿ ಜಿಲ್ಲೆಯ ಕಾಂಗ್ರೆಸ್‌ನ ಪರಿಸ್ಥಿತಿ ಕಳೆದ ಮೂರು ವರ್ಷಗಳಿಂದ ನನಗೆ ಹಿತಕರವಾಗಿರಲಿಲ್ಲ. ಅಲ್ಲಿ ನನಗೆ ಉಸಿರುಗಟ್ಟಿಸುವ ವಾತಾವರಣವಿತ್ತು. ಸಮಸ್ಯೆ ಬಗೆಹರಿಸುವಂತೆ ಪಕ್ಷದ ವರಿಷ್ಠರಿಗೆ ಹಲವು ಬಾರಿ ಮನವಿ ಮಾಡಿದಾಗಲೂ ಸಮಸ್ಯೆ ಬಗೆಹರಿಸುತ್ತೇವೆ ಎಂದು ಆಶ್ವಾಸನೆ ನೀಡಿದ್ದರಷ್ಟೆ ಹೊರತು ಅದನ್ನು ಸರಿಪಡಿಸಲು ಮುಂದಾಗಲಿಲ್ಲ. ಹೀಗಾಗಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದೆ ಎಂದು ಸಮಜಾಯಿಷಿ ನೀಡಿದರು.
ಬೆಂಬಲಿಗರ ಸೇರ್ಪಡೆ ವಿಚಾರ: ನಾನು ಬಿಜೆಪಿ ಸೇರಿದ್ದೇನೆ. ನನ್ನ ಹಲವು ಬೆಂಬಲಿಗರು ಬಿಜೆಪಿ ಸೇರಲು ಉತ್ಸುಕರಾಗಿದ್ದಾರೆ. ಬೂತ್, ಗ್ರಾಮೀಣ ಮಟ್ಟದ ಬಿಜೆಪಿ ಕಾರ್ಯಕರ್ತರ ಓಲೈಸಿ, ಮನ ಒಲಿಸಿ ಅವರ ಒಪ್ಪಿಗೆಯೊಂದಿಗೆ ಅವರನ್ನು ಪಕ್ಷಕ್ಕೆ ಸೇರಿಸಲು ಪ್ರಯತ್ನಿಸಲಾಗುವುದು ಎಂದರು.
ತಾವು ಶಾಸಕ, ಸಚಿವರಾಗಿದ್ದಾಗ ಬಿಜೆಪಿ ಕಾರ್ಯಕರ್ತರ ಮೇಲೆ ಕೇಸು, ಪ್ರಕರಣ ದಾಖಲಿಸಿದ ಕುರಿತು ಕೇಳಿದಾಗ, ನಾನು ಯಾರ ಮೇಲೆ ಕೇಸು ಹಾಕಿಸಿದ್ದೇನೊ ನೆನಪಿಲ್ಲ. ಆದರೆ ಕೇಸು ಹಾಕುವುದು ನನ್ನ ಕೆಲಸವಲ್ಲ ಎಂದು ಅವರು ಹೇಳಿದರು.
ಶಾಸಕ ಕೆ.ರಘುಪತಿ ಭಟ್ ಒಪ್ಪಿಗೆ ಇಲ್ಲದಿದ್ದರೆ ನನಗೆ ಬಿಜೆಪಿ ಸೇರಲು ಸಾಧ್ಯವಾಗುತ್ತಿರಲ್ಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪಕ್ಷವನ್ನು ತೊರೆದಿರುವುದರಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ನೋವು, ದು:ಖ ಖಂಡಿತ ಆಗುತ್ತದೆ. ಇದರಿಂದ ಅವರು ಬಯ್ಯುವುದು ಸಹಜ. ಇದರಿಂದ ನಾನು ಕುಗ್ಗುವುದಿಲ್ಲ. ಚುನಾವಣೆ ಬಂದಾಗ ಸ್ಪರ್ಧಿಸುವ ವಿಚಾರ ಚರ್ಚಿಸೋಣ ಎಂದು ಪ್ರಮೋದ್ ಮಧ್ವರಾಜ್ ಹೇಳಿದರು.







