ರಾಮಕೃಷ್ಣ ಮಠದ ಅಮೃತ ಮಹೋತ್ಸವದ ಲೋಗೊ ಅನಾವರಣ

ಮಂಗಳೂರು : ರಾಮಕೃಷ್ಣ ಮಠ ಸ್ಥಾಪನೆಯಾಗಿ ೭೫ ವರ್ಷಕ್ಕೆ ಪದಾರ್ಪಣೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜೂ.೩,೪ರಂದು ಅಮೃತಮಹೋತ್ಸವ ವರ್ಷಾಚರಣೆಗೆ ಚಾಲನೆ ನೀಡಲಾಗುತ್ತದೆ. ಆ ಪ್ರಯುಕ್ತ ಅಮೃತ ಮಹೋ ತ್ಸವದ ಲೋಗೋವನ್ನು ಮಂಗಳವಾರ ನಗರದ ರಾಮಕೃಷ್ಣ ಆಶ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್ ಅನಾವರಣಗೊಳಿಸಿದರು.
ಬಳಿಕ ಮಾತನಾಡಿದ ಅವರು ರಾಮಕೃಷ್ಣ ಮಠ ಧಾರ್ಮಿಕವಾಗಿ ಮಾತ್ರವಲ್ಲ ಶೈಕ್ಷಣಿಕ ಹಾಗೂ ಸಾಮಾಜಿಕ ವಾಗಿಯೂ ಕಾರ್ಯನಿರ್ವಹಿಸುತ್ತಿದೆ. ಸಮಾಜಕ್ಕೆ ಸಂಸ್ಕೃತಿ, ಸಂಸ್ಕಾರ ನೀಡುವ ಕೆಲಸ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಯ ಸ್ವಚ್ಛ ಭಾರತ ಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಈ ಮಠ ಯಶಸ್ವಿಯಾಗಿದೆ ಎಂದರು.
ಮಂಗಳೂರು ರಾಮಕೃಷ್ಣ ಮಠದ ಮುಖ್ಯಸ್ಥ ಸ್ವಾಮಿ ಜಿತಕಾಮಾನಂದಜಿಯ ಸಮ್ಮುಖದಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಜೂ.೩ರಂದು ರಾಮಕೃಷ್ಣ ಮಠಗಳ ಉಪಾಧ್ಯಕ್ಷ ಸ್ವಾಮಿ ಗೌತಮಾನಂದಜಿ ಚೆನ್ನೈ ಉದ್ಘಾಟಿಸುವರು. ವರ್ಷಪೂರ್ತಿ ನಡೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಲು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯನ್ನು ಆಹ್ವಾನಿಸಲಾಗಿದೆ. ಜೂ.೪ರಂದು ದೇಶದ ನಾನಾ ಭಾಗಗಳಿಂದ ನೂರು ಮಂದಿ ಸ್ವಾಮೀಜಿ ಆಗಮಿಸಲಿದ್ದಾರೆ. ಅಂದು ವಿಶೇಷವಾಗಿ ಅಮೃತ ಸಂಗಮ ಕಾರ್ಯ ಕ್ರಮ ನಡೆಯಲಿದೆ ಎಂದರು.
ಮೇಯರ್ ಪ್ರೇಮಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಠದ ಕಾರ್ಯಕ್ರಮಗಳ ಮಾರ್ಗದರ್ಶಕ ಕ್ಯಾ.ಗಣೇಶ್ ಕಾರ್ಣಿಕ್ ಉಪಸ್ಥಿತರಿದ್ದರು. ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮದ ರೂವಾರಿ ಸ್ವಾಮಿ ಏಕಗಮ್ಯಾನಂದ ಸ್ವಾಗತಿಸಿದರು. ಸಂಯೋಜಕ ಉಮಾನಾಥ ಕೋಟೆಕಾರ್ ವಂದಿಸಿದರು. ರಂಜನ್ ಬೆಳ್ಳರ್ಪಾಡಿ ನಿರೂಪಿಸಿದರು.