ಕನ್ನಡ ಭವನ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ:ಸುನಿಲ್ ಕುಮಾರ್

ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತಿಗೆ ಸರಕಾರ ನೀಡಿರುವ ನಿವೇಶನದಲ್ಲಿ ಅತ್ಯುತ್ತಮ ಕನ್ನಡ ಭವನ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಭರವಸೆ ನೀಡಿದ್ದಾರೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಯೋಗದ ಜೊತೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಕನ್ನಡ ಪರವಾದ ಮತ್ತು ಸಾಂಸ್ಕೃತಿಕ ಸಂಚಲನ ಮೂಡಿಸುವ ವೇದಿಕೆಯಾಗಿ ಕನ್ನಡ ಭವನ ನಿರ್ಮಾಣಗೊಳ್ಳಬೇಕು. ಕನ್ನಡ ಭವನಕ್ಕೆ ಸಂಬಂಧಿಸಿದ ಯೋಜನೆ ರೂಪುರೇಷಗಳನ್ನು ನೀಲನಕ್ಷೆ ಯೊಂದಿಗೆ ತಯಾರಿಸಿದ ನಂತರ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.
ನಿಯೋಗದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕನ್ನಡ ಭವನ ಸಮಿತಿಯ ಕಾರ್ಯಾಧ್ಯಕ್ಷ ಕಟ್ಟಿಂಗೇರಿ ದೇವದಾಸ ಹೆಬ್ಬಾರ್, ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕೋಶಾಧಿಕಾರಿ ಮನೋಹರ ಪಿ, ಪ್ರಧಾನ ಸಂಚಾಲಕ ಭುವನಪ್ರಸಾದ್ ಹೆಗ್ಡೆ, ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್.ಪಿ., ಬೈಂದೂರು ತಾಲೂಕು ಅಧ್ಯಕ್ಷ ಡಾ. ರಘು ನಾಯಕ್, ಕಾಪು ತಾಲೂಕು ಅಧ್ಯಕ್ಷ ಪುಂಡಲೀಕ ಮರಾಠೆ, ಉಡುಪಿ ತಾಲೂಕು ಕಾರ್ಯದರ್ಶಿ ಜನಾರ್ದನ್ ಕೊಡವೂರು, ಬೈಂದೂರು ಕಾರ್ಯದರ್ಶಿ ನಾಗರಾಜ ಪಟ್ವಾಲ್ ಉಪಸ್ಥಿತರಿದ್ದರು.