ಶಿವಮೊಗ್ಗ: ಬಗರ್ ಹುಕುಂ, ಅರಣ್ಯ ಭೂಮಿ ಸಾಗುವಳಿದಾರರ ಸಮಸ್ಯೆ ಪರಿಹಾರಕ್ಕೆ ಒತ್ತಾಯ
ಆ.9ರಂದು ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ರಾಜ್ಯಮಟ್ಟದ ಹೋರಾಟ

ಶಿವಮೊಗ್ಗ, ಮೇ.10: ಜಿಲ್ಲೆಯ ಬಗರ್ ಹುಕುಂ,ಅರಣ್ಯ ಭೂಮಿ ಸಾಗುವಳಿದಾರರ ಸಮಸ್ಯೆಗಳನ್ನು ಇಟ್ಟುಕೊಂಡು ಶಿವಮೊಗ್ಗದ ಕಾಗೋಡಿನಲ್ಲಿ ಆಗಸ್ಟ್ 9ರಂದು ರಾಜ್ಯಮಟ್ಟದ ಹೋರಾಟ ರೂಪಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಘೋಷಿಸಿದರು.
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಂಗಳವಾರ ಜಿಲ್ಲಾ ಭೋವಿ ಸಮುದಾಯ ಭವನದ ಎದುರು ಆಯೋಜಿಸಲಾಗಿದ್ದ ಜನಧ್ವನಿ ಸಮಾವೇಶವನ್ನು ಡೊಳ್ಳು ಬಾರಿಸುವುದು ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕ್ವಿಟ್ ಇಂಡಿಯಾ ದಿನಾಚರಣೆಯ ಅಂಗವಾಗಿ ಆಗಸ್ಟ್ 9 ರಂದು ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಕಾಗೋಡಿನಲ್ಲಿ ಬಗರ್ ಹುಕುಂ,ಅರಣ್ಯ ಭೂಮಿ ಸಾಗುವಳಿದಾರರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ರಾಜ್ಯ ಮಟ್ಟದ ಹೋರಾಟ ರೂಪಿಸಲಾಗುತ್ತದೆ.ರಾಜ್ಯಮಟ್ಟದ ನಾಯಕರೆಲ್ಲರೂ ಈ ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಈಶ್ವರಪ್ಪನವರಿಗೆ ರಾಜೀನಾಮೆ ನೀಡಿ ಎಂದು ಕಾಂಗ್ರೆಸ್ ಪಕ್ಷ ಬೇಡಿಕೆ ಇಟ್ಟಿರಲಿಲ್ಲ. ಸಂತೋಷ್ ಪಾಟೀಲ್ ಸಾವಿಗೆ ನ್ಯಾಯಕೊಡಿ ಎಂದು ಆಗ್ರಹಿಸಲಾಗಿತ್ತು.ಸಿಎಂ ಬೊಮ್ಮಾಯಿ ಹಾಗೂ ಗೃಹಸಚಿವ ಆರಗ ಅವರನ್ನು ರಕ್ಷಣೆ ಮಾಡುವ ಕೆಲಸ ಮಾಡಿದ್ರು,ಭ್ರಷ್ಟಾಚಾರ ತಡೆಯ ಕೇಸ್ ಅನ್ನು ಹಾಕಬೇಕಿತ್ತು ಅದನ್ನು ಮಾಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯವರು ಇತ್ತೀಚಿಗೆ ಟೋಪಿ ಹಾಕುತ್ತಿದ್ದಾರೆ. ಯುವಕರಿಗೆ ಕೇಸರಿ ಹಾಕಿಸುತ್ತಿದ್ದಾರೆ.ನಿಮಗೂ ಕೇಸರಿಗೂ ಎನ್ರೀ ಸಂಬಂಧ. ಯಾರಾದರೂ ಸತ್ತಿದ್ದಾರಾ..? ನೀವು ಯಾವಾಗಲೂ ಕೆಂಪು ಟೋಪಿ ಹಾಕೋಬೇಕು. ನಿಮಗೆ ರಕ್ತವೇ ಬೇಕಲ್ಲವೇ ಎಂದು ಬಿಜೆಪಿಗೆ ಕುಟುಕಿದ ಅವರು, ಈ ಹಿಂದೆ ಗಂಗಾ ಸ್ನಾನ ತುಂಗಾ ಪಾನ ಎಂಬ ಮಾತಿತ್ತು.ಈಗ ತುಂಗಾ ನದಿ ಮಾತ್ರವಲ್ಲ. ಈಡೀ ರಾಜ್ಯವನ್ನೇ ಕಲ್ಮಶ ಮಾಡಿಟ್ಟಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ ಗ್ಲೋಬಲ್ ಇನ್ವೇಸ್ಟ್ ಮೆಂಟ್ ಮಾಡ್ತಿವಿ ಅಂತಾ ಹೊರಟ್ಟಿದ್ದಾರೆ.ಯಡಿಯೂರಪ್ಪ, ಈಶ್ವರಪ್ಪ ಶಿವಮೊಗ್ಗದಲ್ಲಿ ಕರೆದುಕೊಂಡು ಬಂದು ಮಾಡಲಿ ನೋಡೋಣ.5-10 ಸಾವಿರ ಜನರಿಗೆ ಉದ್ಯೋಗವಾಗಿದೆ ಕೊಡುವ ಕೆಲಸ ಮಾಡಲಿ.ಯಾರಾದ್ರೂ ಒಬ್ರೂ ಇನ್ವೇಸ್ಟ್ ಮೆಂಟ್ ಗೆ ಬರ್ತಾರ ಎಂದು ಅವರಿಗೆ ಗೊತ್ತಾಗುತ್ತೆ ಎಂದು ವ್ಯಂಗ್ಯವಾಡಿದರು.
ಕಮಲ ಯಾವತ್ತು ಶುದ್ಧವಾದ ಪ್ರದೇಶದಲ್ಲಿ ಬೆಳೆಯಲ್ಲ. ಕೆಸರಿನಲ್ಲಿ ಮಾತ್ರ ಬೆಳೆಯುತ್ತದೆ.ಬಿಜೆಪಿಯವರು ಕೂಡ ಹಾಗೇ. ಅದಕ್ಕಾಗಿಯೇ ಶಾಂತಿ ಕದಡೋದು.ಶಾಂತಿ- ಸುವ್ಯವಸ್ಥೆ ಹಾಳು ಮಾಡಿ, ಅವ್ಯವಸ್ಥೆ ಸೃಷ್ಟಿಸಿ ಇವರು ಅಧಿಕಾರಕ್ಕೆ ಬರ್ತಾರೆ.ಅದ್ರೇ, ನಾವು ಶುದ್ಧವಾದ ರಾಜಕೀಯವನ್ನು ಕೊಟ್ಟಿದ್ದೆವೆ.ರಾಷ್ಟ್ರದ ಭ್ರಷ್ಟ ರಾಜ್ಯ ಎಂದು ಕರ್ನಾಟಕಕ್ಕೆ ಸ್ಟ್ಯಾಂಪ್ ಹಾಕಿ ಬಿಟ್ಟಿದ್ದಾರೆ.ಅದನ್ನು ತೆಗೆಯುವ ಕೆಲಸ ಮೊದಲು ಮಾಡಬೇಕು ಎಂದರು.
ರಾಜ್ಯದಲ್ಲಿ 150 ಸ್ಥಾನ ಪಡೆದು, ಕಾಂಗ್ರೆಸ್ ಅಧಿಕಾರಕ್ಕೆ ಬಂದು ಆ ಕೆಲಸವಾಗಬೇಕು.ಪಿಎಸ್‌ಐ ಹಗರಣ ತನಿಖೆ ನಡೆಯುವ ಮುನ್ನವೇ ಎಕ್ಸಾಂ ಘೋಷಣೆಯಾಗಿದೆ. ತನಿಖೆಯಾಗಿ ಮತ್ತಷ್ಟು ಸತ್ಯ ಹೊರಬರುವ ಮುನ್ನ ಗೃಹಸಚಿವರು ಹೀಗೆ ಮಾಡಿದ್ದಾರೆ. ರಾಜ್ಯಕ್ಕೆ ಕಪ್ಪುಚುಕ್ಕೆಯಂತೆ ಬಿಜೆಪಿ ಸರ್ಕಾರ ಇದ್ದು, ಅದನ್ನು ತೆಗೆಯಬೇಕು ಎಂದು ಹೇಳಿದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ,ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ಭ್ರಷ್ಟಾಚಾರದಿಂದ ರಾಜ್ಯ ಮುಳುಗಿ ಹೋಗಿದ್ದು, ಅಭಿವೃದ್ಧಿ ನಿಂತುಹೋಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಅತ್ಯಂತ ಅಪಾಯದ ಸ್ಥಿತಿ ಎಂದು ಬಿಜೆಪಿ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು.
ಶಿವಮೊಗ್ಗ ಜಿಲ್ಲೆ ಹೋರಾಟದ ನೆಲ. ಹೋರಾಟದ ಮೂಲಕವೇ ಜಿಲ್ಲೆಗೆ ಹಲವು ಶಾಸನ, ಸೌಲಭ್ಯಗಳನ್ನು ಪಡೆಯಲಾಗಿದೆ. ಹೀಗಾಗಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಹೋರಾಟದ ಮೂಲಕವೇ ಮತ್ತೆ ಅಧಿಕಾರಕ್ಕೆ ಬರೋಣ. ಜನವಿರೋಧಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದೃವನಾರಾಯಣ್,ಮಾಜಿ ಸಚಿವ ಕಿಮ್ಮನೆ ರತ್ನಾಕರ್,ಶಾಸಕರಾದ ರಾಜೇಗೌಡ,ವೆಂಕಟರಮಣಪ್ಪ,ಬಿ.ಕೆ ಸಂಗಮೇಶ್,ಮಾಜಿ ಶಾಸಕ ಮಧುಬಂಗಾರಪ್ಪ,ಆರ್.ಪ್ರಸನ್ನ ಕುಮಾರ್,ಎಐಸಿಸಿ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿಶ್ರೀನಿವಾಸ್,ಮುಖಂಡರಾದ ಆರ್.ಎಂ ಮಂಜುನಾಥ ಗೌಡ,ಮುಖಂಡರಾದ ಭೀಮಣ್ಣನಾಯ್ಕ್,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎಸ್ ಸುಂದರೇಶ್ ಹಾಗೂ ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯರು ಸೇರಿದಂತೆ ಜಿಲ್ಲಾ ಮುಖಂಡರು ಉಪಸ್ಥಿತರಿದ್ದರು.






.jpg)
.jpg)

