ರಶ್ಯದ ವೀಡಿಯೊ ವೇದಿಕೆಯ ಮೇಲೆ ಸೈಬರ್ ದಾಳಿ: ವಿಜಯ ದಿವಸ ನೇರಪ್ರಸಾರಕ್ಕೆ ಅಡ್ಡಿ
ಮಾಸ್ಕೊ, ಮೇ 10: ರಶ್ಯದ ರುಟ್ಯೂಬ್ ವೀಡಿಯೊ ವೇದಿಕೆ ಸೋಮವಾರ ಭಾರೀ ಸೈಬರ್ ದಾಳಿಗೆ ಒಳಗಾಗಿದ್ದು ಮಂಗಳವಾರವೂ ಕಾರ್ಯನಿರ್ವಹಣೆ ಸ್ಥಗಿತಗೊಂಡಿದೆ ಎಂದು ವರದಿಯಾಗಿದೆ. ಸೋಮವಾರ ರಶ್ಯದಲ್ಲಿ ನಡೆದ ವಿಜಯ ದಿನಾಚರಣೆಯ ನೇರ ಪ್ರಸಾರಕ್ಕೆ ಸಜ್ಜಾಗುತ್ತಿದ್ದ ಸಂದರ್ಭ ವೀಡಿಯೊ ವೇದಿಕೆ ಸೈಬರ್ ದಾಳಿಗೆ ಗುರಿಯಾಗಿ ಸ್ಥಗಿತಗೊಂಡಿತ್ತು.
ರುಟ್ಯೂಬ್ ಇತಿಹಾಸದಲ್ಲೇ ಇದು ಬೃಹತ್ ಸೈಬರ್ ದಾಳಿಯಾಗಿದೆ. ವೀಡಿಯೊ ವೇದಿಕೆಯನ್ನು ಮರುಸ್ಥಾಪಿಸಲು ಇಂಜಿನಿಯರ್ ಗಳು ಆರಂಭದಲ್ಲಿ ಯೋಚಿಸಿದ್ದಕ್ಕಿಂತ ಅಧಿಕ ಸಮಯ ಬೇಕಾಗಬಹುದು ಎಂದು ಸಂಸ್ಥೆಯ ಹೇಳಿಕೆ ತಿಳಿಸಿದೆ. ಮಾಸ್ಕೋದ ರೆಡ್ ಸ್ಕ್ವೇರ್ (ಕೆಂಪು ಚೌಕಿ)ಯಲ್ಲಿರುವ ವಿಜಯ ದಿವಸದ ವಾರ್ಷಿಕ ದಿನವಾದ ಸೋಮವಾರ ಬೆಳಿಗ್ಗೆ ರುಟ್ಯೂಬ್ ಮೇಲೆ ಸೈಬರ್ ದಾಳಿ ನಡೆದಿದೆ.
ರಶ್ಯದ ಸಂಸ್ಥೆಗಳ ವಿರುದ್ಧ ಕಳೆದ 2 ತಿಂಗಳಿಂದ ನಿರಂತರ ಸೈಬರ್ ದಾಳಿಯ ಬಳಿಕ ಈಗ ಹ್ಯಾಕರ್ಗಳು ರುಟ್ಯೂಬ್ ತಲುಪಿದ್ದಾರೆ. ವೀಡಿಯೊ ನೇರಪ್ರಸಾರದ ಸೈಟ್ ಮೇಲೆ ದಾಳಿ ನಡೆಸಿರುವ ಕೆಲವರು, ವಿಜಯ ದಿವಸ ಕವಾಯತು ಮತ್ತು ರಜಾದಿನದ ಪಟಾಕಿ ಸಿಡಿತದ ಸಂಭ್ರಮಕ್ಕೆ ತಡೆಯೊಡ್ಡಲು ಪ್ರಯತ್ನಿಸಿದ್ದಾರೆ ಎಂದು ಸಂಸ್ಥೆಯ ಹೇಳಿಕೆ ತಿಳಿಸಿದೆ.
ಈ ಮಧ್ಯೆ, ಸೋಮವಾರ ಉಕ್ರೇನ್ ಮಾಧ್ಯಮಗಳಲ್ಲಿ ರಶ್ಯದ ಎಂಟಿಎಸ್, ಎನ್ಟಿವಿ-ಪ್ಲಸ್, ರೊಸ್ಟೆಲೆಕಾಮ್ ಮತ್ತು ವಿಂಕ್ಸ್ ಟಿವಿ ಚಾನೆಲ್ ಗಳ ಹ್ಯಾಕ್ ಅನ್ನು ತೋರಿಸಲು ಉದ್ದೇಶಿಸಿರುವ ಫೋಟೊಗಳನ್ನು ಪ್ರಕಟಿಸಲಾಗಿದೆ. ಜತೆಗೆ ‘ ಸಾವಿರಾರು ಉಕ್ರೇನಿಯನ್ನರು ಹಾಗೂ ಅವರ ಮಕ್ಕಳ ರಕ್ತ ನಿಮ್ಮ ಕೈಗೆ ಮೆತ್ತಿಕೊಂಡಿದೆ. ಆದರೆ ಟಿವಿ ಚಾನೆಲ್ಗಳು ಮತ್ತು ಅಧಿಕಾರಿಗಳು ಯುದ್ಧ ನಡೆದಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ’ ಎಂಬ ಸಂದೇಶವನ್ನೂ ಪ್ರಕಟಿಸಲಾಗಿದೆ. ಅಲ್ಲದೆ, ಸೋಮವಾರ ಉಕ್ರೇನ್ ನಲ್ಲಿ ರಶ್ಯದ ರಕ್ತಸಿಕ್ತ ಕಾರ್ಯಾಚರಣೆಯನ್ನು ಖಂಡಿಸುವ ಸಂದೇಶವು ಉಕ್ರೇನ್ ಸರಕಾರದ ಪರವಾಗಿರುವ ಸುದ್ಧಿ ವೆಬ್ಸೈಟ್ ಲೆಂಟಾ.ರು ನಲ್ಲಿ ಕೆಲ ಹೊತ್ತು ಕಾಣಿಸಿಕೊಂಡಿತ್ತು. ಪತ್ರಕರ್ತರಾದ ಇಗೊರ್ ಪೊಲ್ಯಕೋವ್ ಮತ್ತು ಅಲೆಕ್ಸಾಂಡರ್ ಮಿರೊಶ್ನಿಕೊವ ಸಹಿ ಹಾಕಿರುವ ಈ ವರದಿಯನ್ನು ತಕ್ಷಣ ಹಿಂಪಡೆಯಲಾಗಿದೆ.