ಉಕ್ರೇನ್- ರಷ್ಯಾ ಸಂಘರ್ಷ ಶಮನ ಸದ್ಯಕ್ಕಿಲ್ಲ : ಅಮೆರಿಕ
ವಾಷಿಂಗ್ಟನ್: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಉಕ್ರೇನ್ ಜತೆಗಿನ ಯುದ್ಧವನ್ನು ಕೇವಲ ಡಾನ್ ಬಸ್ ದಾಳಿಗೆ ಸೀಮಿತಗೊಳಿಸುವ ಸಾಧ್ಯತೆ ಇಲ್ಲ. ರಷ್ಯಾ ನಿಯಂತ್ರಿತ ಮೊಲ್ಡೋವಾ ಪ್ರದೇಶಕ್ಕೆ ಭೂ ಸೇತುವೆ ನಿರ್ಮಿಸಲು ರಷ್ಯಾ ಬದ್ಧವಾಗಿದೆ ಎಂದು ಅಮೆರಿಕದ ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕ ಅವ್ರಿಲ್ ಹೇನ್ಸ್ ಹೇಳಿದ್ದಾರೆ.
ಪುಟಿನ್ ಅವರು ಮಾರ್ಷಿಯಲ್ ಕಾನೂನು ಆದೇಶ ಸೇರಿದಂತೆ ತಮ್ಮ ಸಂಪೂರ್ಣ ದೇಶವನ್ನು ಯುದ್ಧಕ್ಕಾಗಿ ಸಂಘಟಿಸುವ ಸಾಧ್ಯತೆ ಅಧಿಕವಾಗಿದೆ ಮತ್ತು ಉಕ್ರೇನ್‍ಗೆ ಪಾಶ್ಚಿಮಾತ್ಯ ದೇಶಗಳ ನೆರವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಿದ್ದಾರೆ ಎಂದು ಗುಪ್ತಚರ ವಿಭಾಗ ಹೇಳಿದೆ.
"ಅಧ್ಯಕ್ಷ ಪುಟಿನ್ ಅವರು ಉಕ್ರೇನ್ ಜತೆ ಸುಧೀರ್ಘ ಸಂಘರ್ಷಕ್ಕೆ ಸಜ್ಜಾಗಿದ್ದು, ಡಾನ್‍ಬಸ್‍ನ ಆಚೆಗೆ ತಮ್ಮ ಗುರಿಯನ್ನು ಸಾಧಿಸುವ ಉದ್ದೇಶ ಹೊಂದಿದ್ದಾರೆ" ಎಂದು ಹೇನ್ಸ್ ಅಭಿಪ್ರಾಯಪಟ್ಟಿದ್ದಾರೆ.
ಉತ್ತರದಲ್ಲಿ ಕೀವ್ ನಗರವನ್ನು ವಶಪಡಿಸಿಕೊಳ್ಳಲು ವಿಫಲವಾದ ಬಳಿಕ ರಷ್ಯನ್ ಪಡೆಗಳನ್ನು ಪೂರ್ವ ಉಕ್ರೇನ್‍ನ ಡಾನ್‍ಬಸ್ ಪ್ರದೇಶದಲ್ಲಿ ಕೇಂದ್ರೀಕರಿಸುವ ಪುಟಿನ್ ನಿರ್ಧಾರ ಕೇವಲ ತಾತ್ಕಾಲಿಕ ಎನ್ನುವುದು ಅಮೆರಿಕ ಗುಪ್ತಚರ ವಿಭಾಗದ ಅಭಿಮತ.