ರಾಜ್ಯದ 129 ಕೋವಿಡ್ ಪ್ರಕರಣಗಳ ಪೈಕಿ 121 ಬೆಂಗಳೂರಲ್ಲಿ!

ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ 129 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 121 ಪ್ರಕರಣಗಳು ಬೆಂಗಳೂರು ನಗರ ಜಿಲ್ಲೆಯಲ್ಲೇ ವರದಿಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬುಲೆಟಿನ್ ಹೇಳಿದೆ.
ಇದರೊಂದಿಗೆ ರಾಜ್ಯದಲ್ಲಿ ಇದುವರೆಗಿನ ಕೋವಿಡ್-19 ಪ್ರಕರಣಗಳ ಸಂಖ್ಯೆ 39,48,966ಕ್ಕೇರಿದೆ. ಮಂಗಳವಾರದ ಪಾಸಿಟಿವಿಟಿ ದರ ಶೇಕಡ 0.95ರಷ್ಟಾಗಿದೆ. ಮಂಗಳವಾರ ಯಾವುದೇ ಸೋಂಕಿತರ ಸಾವು ಸಂಭವಿಸಿಲ್ಲ. ಇದರಿಂದಾಗಿ ಸೋಂಕಿಗೆ ಬಲಿಯಾದವರ ಸಂಖ್ಯೆ 40,063 ಆಗಿದೆ.
ಒಟ್ಟು 128 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಚೇತರಿಸಿಕೊಂಡವರ ಸಂಖ್ಯೆ 39,06,935 ಆಗಿದೆ. ರಾಜ್ಯದಲ್ಲಿ ಇದೀಗ ಸಕ್ರಿಯ ಪ್ರಕರಣಗಳ ಸಂಖ್ಯೆ 1926. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 13542 ಮಾದರಿಗಳನ್ನು ತಪಾಸಣೆ ಮಾಡಲಾಗಿದ್ದು, ಒಟ್ಟು ಪರೀಕ್ಷೆ ಸಂಖ್ಯೆ 6,59,88,893 ಆಗಿದೆ. ಇದುವರೆಗೆ ರಾಜ್ಯದಲ್ಲಿ 10,69,87,400 ಕೋವಿಡ್ ಲಸಿಕಾ ಡೋಸ್‍ಗಳನ್ನು ನೀಡಲಾಗಿದ್ದು, ಮಂಗಳವಾರ 66219 ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.





