ಐಪಿಎಸ್ ಅಧಿಕಾರಿಯ ರಾಜೀನಾಮೆ ಅಂಗೀಕರಿಸದಂತೆ ಆಗ್ರಹ
ಮಂಗಳೂರು : ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿಯಾಗಿದ್ದ ಐಪಿಎಸ್ ಅಧಿಕಾರಿ ಡಾ.ಪಿ. ರವೀಂದ್ರನಾಥ್‌ರ ರಾಜೀನಾಮೆಯನ್ನು ಅಂಗೀಕರಿಸಬಾರದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಕೃಷ್ಣಪ್ಪ ಸ್ಥಾಪಿತ)ಯ ದ.ಕ.ಜಿಲ್ಲಾ ಸಂಚಾಲಕ ರಘು ಕೆ. ಎಕ್ಕಾರ್ ಆಗ್ರಹಿಸಿದ್ದಾರೆ.
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ನಕಲಿ ಜಾತಿ ಪ್ರಮಾಣ ಪತ್ರಗಳ ಬಗ್ಗೆ ಕೂಲಂಕಷ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಂಡಿದ್ದ ಮತ್ತು ಭ್ರಷ್ಟ ರಾಜಕೀಯ ವ್ಯವಸ್ಥೆ, ಅಧಿಕಾರಿ ವರ್ಗ ಹಾಗೂ ಸರಕಾರದ ಕೆಂಗಣ್ಣಿಗೆ ಗುರಿಯಾಗಿ ಪೊಲೀಸು ತರಬೇತಿ ವಿಭಾಗದ ಡಿಜಿಪಿಯಾಗಿ ವರ್ಗಾವಣೆಗೊಂಡು ಅಲ್ಲಿಯೂ ಮುಕ್ತವಾಗಿ, ಸಂವಿಧಾನಬದ್ಧವಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗದೆ ಡಾ. ಪಿ. ರವೀಂದ್ರನಾಥ್ ಮಾನಸಿಕ ವಾಗಿ ನೊಂದಿದ್ದಾರೆ. ಎಸ್ಸಿ /ಎಸ್ಟಿ ಜಾತಿ ಪ್ರಮಾಣ ಪತ್ರದ ದುರುಪಯೋಗ ಮಾಡುತ್ತಿರುವ ವ್ಯಕ್ತಿಗಳು ಹಾಗೂ ಅಧಿಕಾರಿಗಳ ವಿರುದ್ಧ ಸರಕಾರವೇ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕಾಗಿತ್ತು. ಆದರೆ ಅಂತಹ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮಕೈಗೊಳ್ಳುವ ಬದಲು ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳನ್ನೇ ವರ್ಗಾವಣೆ ಮಾಡುವ ಮೂಲಕ ಸರಕಾರವೇ ಅಕ್ರಮಗಳಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ ಎಂದು ರಘು ಎಕ್ಕಾರ್ ಆಪಾದಿಸಿದ್ದಾರೆ.
ಡಾ.ಪಿ. ರವೀಂದ್ರನಾಥ್‌ರ ರಾಜೀನಾಮೆಯನ್ನು ಸರಕಾರ ಯಾವುದೇ ಕಾರಣಕ್ಕೂ ಅಂಗೀಕರಿಸಬಾರದು. ಅವರಿ ಗಾಗಿರುವ ಅನ್ಯಾಯ, ಕಿರುಕುಳವನ್ನು ಸರಿಪಡಿಸಿ, ಅವರ ಸೇವಾ ಹಿರಿತನವನ್ನು, ದಕ್ಷತೆಯನ್ನು ಪರಿಗಣಿಸಿ ಉನ್ನತ ದರ್ಜೆಯ ಹುದ್ದೆ ನೀಡುವಂತೆ ಒತ್ತಾಯಿಸಿದ್ದಾರೆ.