ಸ್ವಾತಂತ್ರ್ಯ ಹೋರಾಟಗಾರ ನಾರಾಯಣ ಉಚ್ಚಿಲ್ ನಿಧನ

ನಾರಾಯಣ ಉಚ್ಚಿಲ್
ಮಂಗಳೂರು : ಸ್ವಾತಂತ್ರ್ಯ ಹೋರಾಟಗಾರ ನಾರಾಯಣ ಕೆ. ಉಚ್ಚಿಲ್ (104) ಮಂಗಳವಾರ ಗೋರಿಗುಡ್ಡೆಯ ತಮ್ಮ ಮಗಳ ಮನೆಯಲ್ಲಿ ನಿಧನರಾದರು.
ಮೃತರು ನಾಲ್ಕು ಪುತ್ರಿಯರು ಮತ್ತು ಓರ್ವ ಪುತ್ರ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಬುಧವಾರ ಸೋಮೇಶ್ವರ ಸಮೀಪದ ಉಚ್ಚಿಲದ ಬೋವಿ ಶಾಲೆ ಬಳಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ಸೋಮೇಶ್ವರ ಉಚ್ಚಿಲದಲ್ಲಿ 1918ರ ಅ.26ರಂದು ಜನಿಸಿದ್ದ ನಾರಾಯಣ ಉಚ್ಚಿಲ್ ಕೇವಲ ನಾಲ್ಕು ದಿನ ಮಾತ್ರ ಶಾಲೆಗೆ ಹೋದವರು. ತಂದೆಯ ಜತೆ ಮೀನುಗಾರಿಕೆ ವೃತ್ತಿ ಆರಂಭಿಸಿದ್ದ ಇವರು 1941ರಲ್ಲಿ ಮುಂಬೈಗೆ ತೆರಳಿದ್ದರು. 1954ರಲ್ಲಿ ಬಟ್ಟೆಯ ಮಿಲ್ನಲ್ಲಿ ಕೆಲಸಕ್ಕೆ ಸೇರಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ನಾರಾಯಣ ಉಚ್ಚಿಲ್ ಬ್ರಿಟಿಷ್ ಪೊಲೀಸರ ತಲೆಗೆ ಹೊಡೆದು ಜೀಪಿಗೆ ಬೆಂಕಿ ಕೊಟ್ಟು ಸುಟ್ಟು ಹಾಕಿ ಬಳಿಕ ಭೂಗತರಾಗಿದ್ದರು. ಆದರೆ ನಾರಾಯಣ ಉಚ್ಚಿಲ್ರ ಸಹೋದರ ಕರುಣಾಕರ್ ಉಚ್ಚಿಲ್ ಸಹಿತ ಹಲವರು ಸಿಕ್ಕಿಬಿದ್ದು ಜೈಲು ಪಾಲಾಗಿದ್ದರು.
ಕಳೆದ ಹಲವು ವರ್ಷಗಳಿಂದ ಮಂಗಳೂರಿನ ಮಗಳ ಮನೆಯಲ್ಲಿದ್ದರು. ರಾಷ್ಟ್ರೀಯ ಹಬ್ಬದ ದಿನಗಳಂದು ಮಕ್ಕಳಿಗೆ ಚಾಕಲೇಟು ಹಂಚಿ ಸಂಭ್ರಮಿಸುತ್ತಿದ್ದರು. ಸುಮಾರು 80 ವರ್ಷಗಳಿಂದ ಗಾಂಧಿ ಟೊಪ್ಪಿ ಧರಿಸುತ್ತಿದ್ದರು.