ವಾಮಂಜೂರು: ಕಟ್ಟಡದಿಂದ ಬಿದ್ದು ಕಾರ್ಮಿಕ ಮೃತ್ಯು
ಮಂಗಳೂರು : ನಗರ ಹೊರ ವಲಯದ ವಾಮಂಜೂರಿನಲ್ಲಿ ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ಬುಧವಾರ ನಡೆದಿದೆ.
ವಾಮಂಜೂರು ಸಮೀಪದ ಶಾಲೆಪದವು ನಿವಾಸಿ ಹರಿಶ್ಚಂದ್ರ ಪೂಜಾರಿ (50) ಮೃತಪಟ್ಟ ಕಾರ್ಮಿಕ. ಇವರು ನಿರ್ಮಾಣ ಹಂತದ ಕಟ್ಟಡದ ಎರಡನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಬಿದ್ದಿದ್ದಾರೆ. ಗಂಭೀರ ಗಾಯಗೊಂಡ ಇವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಷ್ಟರಲ್ಲಿ ಹರಿಶ್ಚಂದ್ರ ಪೂಜಾರಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸುರಕ್ಷತೆ ಕ್ರಮ ಅನುಸರಿಸದೆ ಕೆಲಸ ಮಾಡಿಸಿದ ಗುತ್ತಿಗೆದಾರರ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





