ನರ್ಸಿಂಗ್ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಅಗತ್ಯ: ರವಿಕುಮಾರ್
ಕಾಲೇಜುಗಳ ಮೂಲಭೂತ ಸೌಕರ್ಯ ಪರಿಶೀಲನೆ

ಉಡುಪಿ : ನರ್ಸಿಂಗ್ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿ ಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಸಹ ಕಲ್ಪಿಸುವುದು ಅವಶ್ಯ ಎಂದು ವಿಶೇಷ ಜಂಟಿ ಸದನ ಸಮಿತಿ ಉಪ ಸಮಿತಿಯ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಹೇಳಿದ್ದಾರೆ.
ಬುಧವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಛೇರಿ ಕೋರ್ಟ್‌ಹಾಲ್ ನಲ್ಲಿ ನಡೆದ ನರ್ಸಿಂಗ್ ಹಾಗೂ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜುಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯದಲ್ಲಿ ನರ್ಸಿಂಗ್ ಮತ್ತು ಅಲೈಡ್ ಹೆಲ್ತ್ ಸೈನ್ಸ್ ಕಾಲೇಜುಗಳಲ್ಲಿ ಮೂಲ ಸೌಕರ್ಯಗಳು ಹಾಗೂ ಉಪನ್ಯಾಸಕರ ಕೊರತೆ ಇದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಕಾಲೇಜುಗಳು ಇಂಡಿಯನ್ ನರ್ಸಿಂಗ್ ಕೌನ್ಸಿಲ್ ಹೊರಡಿಸಿರುವ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ ಕುರಿತು ಪರಿಶೀಲಿಸಲು ವಿಶೇಷ ಜಂಟಿ ಸದನ ಸಮಿತಿಯನ್ನು ರಚಿಸಲಾಗಿದೆ ಎಂದರು.
ನರ್ಸಿಂಗ್ ಕೌನ್ಸಿಲ್ ವಿಧಿಸಿರುವ ನಿಯಮಗಳ ಅನುಸಾರ ನರ್ಸಿಂಗ್ ಹಾಗೂ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜುಗಳನ್ನು ನಡೆಸಬೇಕು. ಆದರೆ, ರಾಜ್ಯದಲ್ಲಿ ಬಹಳಷ್ಟು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಬೋಧಕರ ಕೊರತೆ, ಪ್ರಯೋಗಾಲಯಗಳು ವ್ಯವಸ್ಥಿತವಾಗಿಲ್ಲದೇ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಸಾಧ್ಯವಿಲ್ಲದಿರುವುದು ಕಂಡು ಬರುತ್ತಿದೆ. ಕಾಲೇಜುಗಳ ವಾಸ್ತವೀಕತೆಯನ್ನು ಪರಿಶೀಲಿಸಿ, ವರದಿ ಯನ್ನು ಸದನಕ್ಕೆ ನೀಡಲಾಗುವುದು ಎಂದರು.
ನರ್ಸಿಂಗ್ ಕಾಲೇಜುಗಳಿಗೆ ಹೆಚ್ಚಾಗಿ ಹೊರರಾಜ್ಯದ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಕೆಲವು ವಿದ್ಯಾರ್ಥಿಗಳು ತರಗತಿಗೆ ಹಾಜರಾಗದೇ ನೇರವಾಗಿ ಪರೀಕ್ಷೆ ಬರೆದು ಪ್ರಮಾಣಪತ್ರ ಪಡೆಯುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ. ಇದರಿಂದ ಅವರುಗಳ ವೃತ್ತಿ ಜೀವನದಲ್ಲಿ ರೋಗಿಗಳಿಗೆ ಸರಿಯಾದ ಚಿಕಿತ್ಸೆಗಳನ್ನು ನೀಡಲು ಕಷ್ಟಸಾಧ್ಯವಾಗುತ್ತದೆ. ಭವಿಷ್ಯದಲ್ಲಿ ರೋಗಿಗಳು ಬಾರಿ ತೊಂದರೆ ಎದುರಿಸಬೇಕಾಗುತ್ತದೆ. ಇಂತಹವುಗಳಿಗೆ ಕಡಿವಾಣ ಹಾಕುವುದು ಸೂಕ್ತ ಎಂದರು.
ಸಮಿತಿಯ ಸದಸ್ಯ ಹಾಗೂ ವಿಧಾನಪರಿಷತ್ ಸದಸ್ಯ ಎಸ್. ಸಂಕನೂರ ಮಾತನಾಡಿ, ಇಂಡಿಯನ್ ನರ್ಸಿಂಗ್ ಕೌನ್ಸಿಲ್ ಹೊಸದಾಗಿ ನರ್ಸಿಂಗ್ ಕಾಲೇಜುಗಳನ್ನು ಪ್ರಾರಂಭಿಸುವಾಗ, ಕಾಲೇಜುಗಳಲ್ಲಿ ಇಂತಿಷ್ಟು ಉಪನ್ಯಾಸಕರು, ಉತ್ತಮ ಪ್ರಯೋಗ ಶಾಲೆ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಬೇಕೆಂದು ಸ್ಪಷ್ಟ ನಿಯಮಗಳನ್ನು ವಿಧಿಸಿದೆ. ಆದರೆ ಕೆಲವು ಕಾಲೇಜುಗಳು ಇವುಗಳ ಪರಿಪಾಲನೆ ಮಾಡುತ್ತಿಲ್ಲ ಎಂದರು.
ನರ್ಸಿಂಗ್ ವಿದ್ಯಾರ್ಥಿಗಳು ಐಚ್ಛಿಕ ವಿಷಯ, ಪ್ರಯೋಗ ಶಾಲೆಗಳ ಶಿಕ್ಷಣ ಪಡೆಯುವುದರ ಜೊತೆಗೆ ಆಸ್ಪತ್ರೆಗಳಲ್ಲಿ ತರಬೇತಿ ಪಡೆಯಲು ಹೋದಾಗ ಸ್ಥಳೀಯ ಜನರೇ ಹೆಚ್ಚು ರೋಗಿಗಳಾಗಿರುವುದರಿಂದ ಹೊರ ರಾಜ್ಯದಿಂದ ವಿದ್ಯಾಭ್ಯಾಸಕ್ಕೆ ಬಂದ ವಿದ್ಯಾರ್ಥಿಗಳಿಗೆ ಅವರೊಂದಿಗೆ ಕನ್ನಡದಲ್ಲಿ ವ್ಯವಹರಿಸು ವುದು ಕಷ್ಟ. ಅವರುಗಳಿಗೆ ಕನ್ನಡ ಕಲಿಸುವ ವ್ಯವಸ್ಥೆಯಾಗಬೇಕು ಎಂದರು.
ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾತನಾಡಿ, ಕಳೆದ ಕೋವಿಡ್ ಸಂದರ್ಭ ದಲ್ಲಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಕೋವಿಡ್ ನಿಯಂತ್ರಣ ಸೇರಿದಂತೆ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ನರ್ಸಿಂಗ್ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸಮಿತಿ ನೀಡುವ ಸಲಹೆಗಳನ್ನು ತಪ್ಪದೇ ಅನುಷ್ಠಾನಗೊಳಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರೂ ಹಾಗೂ ವಿಶೇಷ ಜಂಟಿ ಸದನ ಸಮಿತಿ, ಉಪ ಸಮಿತಿಯ ಸದಸ್ಯರಾದ ಮುನಿರಾಜು ಗೌಡ, ಡಾ.ಅವಿನಾಶ್, ಉಮೇಶ್ ಜಾಧವ್, ಅಪರ ಕಾರ್ಯದರ್ಶಿ ಎಸ್ ನಿರ್ಮಲಾ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ, ಜಿಲ್ಲಾ ಸರ್ಜನ್ ಡಾ. ಮಧುಸೂದನ ನಾಯಕ್ ಹಾಗೂ ವಿವಿಧ ನರ್ಸಿಂಗ್ ಕಾಲೇಜುಗಳ ಪ್ರಾಂಶುಪಾಲರು, ನೂಡೆಲ್ ಅಧಿಕಾರಿಗಳು ಉಪಸ್ಥಿತರಿದ್ದರು.
ನರ್ಸಿಂಗ್ ಕಾಲೇಜುಗಳಿಗೆ ಭೇಟಿ, ಪರಿಶೀಲನೆ
ನರ್ಸಿಂಗ್ ಕಾಲೇಜುಗಳ ಮೂಲ ಸೌಕರ್ಯಗಳ ಪರಿಶೀಲನೆ ಕುರಿತ ವಿಶೇಷ ಜಂಟಿ ಸದನ ಸಮಿತಿ ಉಪ ಸಮಿತಿಯ ಅಧ್ಯಕ್ಷ ಎನ್.ರವಿಕುಮಾರ್, ಉಪ ಸಮಿತಿಯ ಸದಸ್ಯರುಗಳಾದ ಎಸ್. ಸಂಕನೂರು, ಮುನಿರಾಜು ಗೌಡ, ಡಾ. ಅವಿನಾಶ್ ಉಮೇಶ್ ಜಾಧವ್ ಅಲೆವೂರಿನ ಉಡುಪಿ ಸಮೂಹ ಶಿಕ್ಷಣ ಹಾಗೂ ಆದರ್ಶ ನರ್ಸಿಂಗ್ ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲಿಸಿ ವಿದ್ಯಾರ್ಥಿಗಳಿಂದ ಮಾಹಿತಿಗಳನ್ನು ಪಡೆದರು.
ಈ ಸಂದರ್ಭದಲ್ಲಿ ಅಪರ ಕಾರ್ಯದರ್ಶಿ ಎಸ್.ನಿರ್ಮಲಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ, ಜಿಲ್ಲಾ ಸರ್ಜನ್ ಡಾ. ಮಧುಸೂದನ ನಾಯಕ್ ಹಾಗೂ ನರ್ಸಿಂಗ್ ಕಾಲೇಜು ಗಳ ನೂಡೆಲ್ ಅಧಿಕಾರಿಗಳು ಉಪಸ್ಥಿತರಿದ್ದರು.







