ಬೆಂಗಳೂರು | ಆತ್ಮಾವಲೋಕನ ಸತ್ಯಾಗ್ರಹ: ಸುದ್ದಿವಾಹಿನಿಗಳಿಗೆ ‘ಗುಲಾಬಿ’ ನೀಡಲು ಹೋದ ಹೋರಾಟಗಾರರು ವಶಕ್ಕೆ

ಬೆಂಗಳೂರು, ಮೇ 11: ಕನ್ನಡದ ಕೆಲ ಸುದ್ದಿವಾಹಿನಿಗಳು ತಮ್ಮ ಕರ್ತವ್ಯವನ್ನು ಮರೆತು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿ ಸುದ್ದಿವಾಹಿನಿ ಮುಖ್ಯಸ್ಥರು, ಸಿಬ್ಬಂದಿಗೆ ಗುಲಾಬಿ ನೀಡಲು ಮುಂದಾದ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದರು.
ಬುಧವಾರ ಇಲ್ಲಿನ ಯಶವಂತಪುರ ಬಳಿಯ ಪಬ್ಲಿಕ್ ಟಿವಿ ಸುದ್ದಿವಾಹಿನಿ ಕಚೇರಿ ಮುಂಭಾಗ ಜಮಾಯಿಸಿದ ಹೋರಾಟಗಾರರು, ‘ಆತ್ಮಾವಲೋಕನ ಸತ್ಯಾಗ್ರಹ’ ಕೈಗೊಂಡು, ಸುದ್ದಿ ವಾಹಿನಿಯ ಮುಖಸ್ಥರು, ಕೆಲ ಸಿಬ್ಬಂದಿಗೆ ಗುಲಾಬಿ, ‘ಗಾಂಧಿ ಒಳಗಿನ ಪತ್ರಕರ್ತ’ ಪುಸ್ತಕ ಹಂಚಿಕೆ ಮಾಡಿದರು.
ಇದಾದ ನಂತರ, ಹೋರಾಟದ ಭಾಗವಾಗಿ ಶಿವಾನಂದ ವೃತ್ತದ ಸಮೀಪವಿರುವ ಬಿಟಿವಿ ಹಾಗೂ ಸುವರ್ಣ ಸುದ್ದಿವಾಹಿನಿ ಕಚೇರಿಗೆ ತೆರಳಲು ಹೋರಾಟಗಾರರು ಮುಂದಾದರು. ಈ ವೇಳೆ ಮಧ್ಯ ಪ್ರವೇಶಿಸಿದ ಹೈಗ್ರೌಂಡ್ಸ್ ಠಾಣಾ ಪೊಲೀಸರು, ಎಲ್ಲರನ್ನು ವಶಕ್ಕೆ ಪಡೆದು ಠಾಣೆ ಕರೆದೊಯ್ದರು.
ಹೋರಾಟ ಕುರಿತು ಪ್ರಸ್ತಾಪಿಸಿದ ಸಾಮಾಜಿಕ ಕಾರ್ಯಕರ್ತ ಎಂ. ಯುವರಾಜ್, ಆಧುನಿಕ ತಂತ್ರಜ್ಞಾನದ ಸಹಾಯದಿಂದ ಟೆಲಿವಿಷನ್ ಸುದ್ದಿ ಮಾಧ್ಯಮಗಳು ಇಂದು ಅತ್ಯಂತ ಪ್ರಭಾವಶಾಲಿಯಾಗಿ ಬೆಳೆದಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇದೇ ಮಾಧ್ಯಮಗಳು ಒಟ್ಟು ಸುದ್ದಿ ಪ್ರಸಾರದ ಗುಣಮಟ್ಟದಲ್ಲಿ ಅತಿರೇಕದ ವರ್ತನೆ ಪ್ರದರ್ಶಿಸುತ್ತಿವೆ ಎಂಬ ಭಾವನೆ ಜನ ಸಾಮಾನ್ಯರಲ್ಲಿ ಮೂಡುತ್ತಿದೆ. ಜತೆಗೆ, ಸಾರ್ವಜನಿಕ ಅಭಿಪ್ರಾಯ ರೂಪಿಸುವ ವಿಷಯಗಳಲ್ಲಿ ನೀವು ಏರ್ಪಡಿಸುವ ಚರ್ಚೆಗಳ ಗುಣಮಟ್ಟ ದಿನದಿಂದ ದಿನಕ್ಕೆ ತೀರಾ ಕೆಳಹಂತಕ್ಕೆ ಇಳಿಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವೇಗ ಮತ್ತು ಸ್ಪರ್ಧೆಗೆ ಮಹತ್ವ ನೀಡುವ ಭರದಲ್ಲಿ ಸುದ್ದಿಯ ನಿಖರತೆ ಮತ್ತು ವಾಸ್ತವತೆಗೆ ಧಕ್ಕೆಯಾಗುತ್ತಿರುವ ಸಾಧ್ಯತೆ ಕಾಣುತ್ತಿದೆ. ಅನೇಕ ರಾಜಕಾರಣಿಗಳು ಮತ್ತು ಸಮಾಜದ ಜನಪ್ರಿಯ ವ್ಯಕ್ತಿಗಳು ಇದನ್ನು ಮನಗಂಡು ಮಾಧ್ಯಮಗಳನ್ನೆ ದಿಕ್ಕು ತಪ್ಪಿಸಿ ತಮ್ಮ ಲಾಭಕ್ಕಾಗಿ ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಸಾಕಷ್ಟು ಒಳಮರ್ಮ ನಮ್ಮ ಗಮನಕ್ಕೆ ಬಂದಿದೆ. ಹೀಗಾಗಿ, ‘ಆತ್ಮಾವಲೋಕನ ಸತ್ಯಾಗ್ರಹ’ ನಡೆಸಲಾಯಿತು ಎಂದರು.
ನಾವು ಮೊದಲಿಗೆ ಪಬ್ಲಿಕ್ ಟಿವಿ ಕಚೇರಿ ಮುಂದೆ ಹೋದೆವು. ಅವರು ನಮ್ಮನ್ನು ಬರಮಾಡಿಕೊಂಡಾಗ ಅವರಿಗೆ ಗುಲಾಬಿ ಕೊಟ್ಟು, ಮನವಿಯನ್ನು ನೀಡಿದೆವು, ಅವರು ಕೂಡಾ ನಮ್ಮ ಮನವಿಯನ್ನು ಸ್ವೀಕರಿಸಿದರು. ಆನಂತರ, ಶಾಂತಿಯುತವಾಗಿಯೆ ಗಾಂಧೀಜಿಯ ಭಜನೆಯಾದ ರಘುಪತಿ ರಾಘವ ರಾಜಾರಾಂ ಹಾಡಿ ಅಲ್ಲಿಂದ ತೆರಳಿದಾಗ ಪೊಲೀಸರು ವಶಕ್ಕೆ ಪಡೆದಿದ್ದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿರೋಧ: ನಾವು ಪೊಲೀಸರೊಂದಿಗೆ ಪಬ್ಲಿಕ್ ಟಿವಿ ಕಚೇರಿಯಲ್ಲಿ ಮನವಿ ಮಾಡಿದಂತೆ ಬೇರೆ ಟಿವಿ ಕಚೇರಿ ಮುಂದೆಯೂ ಮನವಿ ಮಾಡಿ ಹೋಗುತ್ತೇವೆ ಎಂದು ತಿಳಿಸಿದಾಗ ವ್ಯಕ್ತಿಯೊಬ್ಬರು ಬಂದು, ಸುವರ್ಣ ಕಚೇರಿ ಮುಂದೆ ಬರುವುದು ಬೇಡ. ಬಿಟಿವಿ ಮುಂದೆ ಕೂಡಾ ಬರುವುದು ಬೇಡ ಎಂದರು. ಅಷ್ಟರಲ್ಲಿ ಹೈಗ್ರೌಂಡ್ ಠಾಣೆಯ ಪೊಲೀಸರು ನಮ್ಮನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ, ನಾವು ಮುಂದಿನ ದಿನಗಳಲ್ಲಿ ಹೋರಾಟ ಮುಂದುವರೆಸುತ್ತೇವೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಲೇಖಕ ಎಚ್.ಕೆ.ವಿವೇಕಾನಂದ, ಹೋರಾಗಾರರಾದ ರೂಪೇಶ್, ಕಲ್ಪನಾ ಶಿವಣ್ಣ, ಜಗನ್, ಮನೋಜ್ ಸೇರಿದಂತೆ ಪ್ರಮುಖರಿದ್ದರು.







