‘ಕಾಮಗಾರಿ ಟೆಂಡರ್' ಲಾಭಾಂಶ ಶೇ.5ಕ್ಕೆ ಮಿತಿಗೊಳಿಸಲು ಆರ್ಥಿಕ ಇಲಾಖೆ ಸುತ್ತೋಲೆ

ಬೆಂಗಳೂರು, ಮೇ 11: ‘ಸರಕಾರಿ ಕಾಮಗಾರಿಗಳ ಟೆಂಡರ್ ಸ್ವೀಕೃತವಾದ ದರಗಳು ಅಂದಾಜು ಮೊತ್ತಕ್ಕಿಂತ ಶೇ.10ಕ್ಕಿಂತ ಹೆಚ್ಚಾಗಿದ್ದಲ್ಲಿ ಅದನ್ನು ಗಣನೀಯ ಹೆಚ್ಚುವರಿ ಟೆಂಡರ್ ಎಂದು ಪರಿಗಣಿಸಲು ಮತ್ತು ಅಂತಹ ವೇಳೆಯಲ್ಲಿ ಎಲ್ಲ ಟೆಂಡರ್‍ಗಳನ್ನು ರದ್ದುಪಡಿಸಿ ಮರುಟೆಂಡರ್ ಕರೆಯುವುದು ಪ್ರಥಮ ಆಯ್ಕೆಯಾಗಿರಬೇಕು' ಎಂದು ಆರ್ಥಿಕ ಇಲಾಖೆ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಐಎನ್‍ಎಸ್ ಪ್ರಸಾದ್ ಸುತ್ತೋಲೆ ಹೊರಡಿಸಿದ್ದಾರೆ.
‘ಆದಾಗ್ಯೂ ಹಲವಾರು ಸಂಗ್ರಹಣಾ ಪ್ರಾಧಿಕಾರಿಗಳು ಪ್ರಸಕ್ತ ಶೇ.10 ಮತ್ತು ಅದಕ್ಕಿಂತ ಹೆಚ್ಚಿನ ದರಗಳಿಗೆ ಟೆಂಡರ್ ಅನುಮೋದಿಸುತ್ತಿರುವುದು ಸರಕಾರದ ಗಮನಕ್ಕೆ ಬಂದಿರುತ್ತದೆ. ಈ ಕುರಿತು ಪರಿಶೀಲಿಸಿದ್ದು, ಸಾರ್ವಜನಿಕ ಸಂಗ್ರಹಣೆಗಳಲ್ಲಿ ಅಂದಾಜು ಮೊತ್ತದ ಮೇಲೆ ಶೇ.5ಕ್ಕಿಂತ ಹೆಚ್ಚಿನ ಲಾಭಾಂಶವುಳ್ಳ ಟೆಂಡರ್ ಅನ್ನು ಯಾವುದೇ ಕಾರಣಕ್ಕೂ ಅಂಗೀಕರಿಸತಕ್ಕದಲ್ಲ.
ಒಂದು ವೇಳೆ ಶೇ.5ಕ್ಕಿಂತ ಹೆಚ್ಚಿನ ಮೊತ್ತದ ಲಾಭಾಂಶವುಳ್ಳ ಟೆಂಡರ್ ಅನ್ನು ಅಂಗೀಕರಿಸಬಯಸಿದಲ್ಲಿ ಸಮರ್ಥನೀಯ ಕಾರಣಗಳನ್ನು ಲಿಖಿತ ರೂಪದಲ್ಲಿ ದಾಖಲಿಸಿ ಉನ್ನತ ಪ್ರಾಧಿಕಾರದ ಅನುಮೋದನೆ ಪಡೆದು ಅಂಗೀಕರಿಸತಕ್ಕದ್ದು. ಮೇಲಿನ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವುದನ್ನು ಎಲ್ಲ ಸಂಗ್ರಹಣಾ ಪ್ರಾಧಿಕಾರಿಗಳು ಖಚಿತಪಡಿಸಿಕೊಳ್ಳತಕ್ಕದ್ದು ಸದರಿ ನಿರ್ದೇಶನದ ಉಲ್ಲಂಘನೆ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕ ಕಾನೂನ ಉಲ್ಲಂಘನೆಯಾಗುತ್ತದೆ' ಎಂದು ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ.







