ಕುಕ್ಕಿಕಟ್ಟೆ ವಿಠಲ ಶೆಟ್ಟಿಗಾರ್ ನಿಧನ

ಉಡುಪಿ : ಕೊಡುಗೈ ದಾನಿ, ಬೆಂಗಳೂರು ‘ಡೈನಾ ಫ್ಯಾಶನ್’ ಮಾಲಕ ಕುಕ್ಕಿಕಟ್ಟೆ ವಿಠ್ಠಲ್ ಶೆಟ್ಟಿಗಾರ್ (80) ಅಲ್ಪ ಕಾಲದ ಅಸೌಖ್ಯದಿಂದ ಬೆಂಗಳೂರು ಯಶವಂತಪುರದ ತಮ್ಮ ಸ್ವಗೃಹದಲ್ಲಿ ಮಂಗಳವಾರ ನಿಧನರಾದರು.
ಹಲವು ವರ್ಷಗಳ ಕಾಲ ಕುಕ್ಕಿಕಟ್ಟೆಯಲ್ಲಿ ಕೈಮಗ್ಗದ ನೇಕಾರಿಕೆ ವೃತ್ತಿ ಮಾಡುತಿದ್ದ ಇವರು, ಬಳಿಕ ಬೆಂಗಳೂರಿ ನಲ್ಲಿ ಜವಳಿ ಉದ್ಯಮ ಕ್ಷೇತ್ರ ಪ್ರವೇಶಿಸಿ ‘ಡೈನಾ ಫ್ಯಾಶನ್ ಗಾರ್ಮೆಂಟ್ಸ್’ ಪ್ರಾರಂಭಿಸಿ ಸಾವಿರಾರು ಮಂದಿಗೆ ಉದ್ಯೋಗ ಕಲ್ಪಿಸಿದ್ದರು. ವಿಠ್ಠಲ್ ಶೆಟ್ಟಿಗಾರ್ ಹಲವಾರು ಕುಟುಂಬಗಳಿಗೆ ಅನ್ನದಾತರಾಗಿದ್ದು, ಸಮಾಜದ ಬಡ ಮಕ್ಕಳ ವಿದ್ಯಾಭ್ಯಾಸ, ವಿವಾಹ, ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಆರ್ಥಿಕ ನೆರವು ನೀಡುತಿದ್ದರು.
ತನ್ನ ದೇಹವನ್ನು ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾನ ನೀಡುವ ಮೂಲಕ ಮಾದರಿಯಾಗಿದ್ದಾರೆ. ದ.ಕ. ಜಿಲ್ಲಾ ಮಹಾಸಭಾದ ಪೋಷಕರು ಆಗಿದ್ದ ವಿಠ್ಠಲ್ ಶೆಟ್ಟಿಗಾರ್ ಕಲ್ಯಾಣಪುರ ವೀರಭದ್ರ ದೇವಸ್ಥಾನ ಸಹಿತ ಹಲವಾರು ಧಾರ್ಮಿಕ ಕೇಂದ್ರಗಳ ಜೀರ್ಣೋದ್ಧಾರಕ್ಕೆ ಸಹಕರಿಸಿದ್ದರು. ಮೃತರು ಪತ್ನಿ, ಓರ್ವ ಗಂಡು, ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.





