ಬೈಂದೂರು; ದರೋಡೆ ಪ್ರಕರಣ: ಆರೋಪಿ ಬಂಧನ
ವಿಜಯ್
ಕುಂದಾಪುರ : ಬೈಂದೂರು ಹಾಗೂ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸುಲಿಗೆ ಹಾಗೂ ದರೋಡೆ ಪ್ರಕರಣದ ಆರೋಪಿಯೊಬ್ಬನನ್ನು ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ನೇತೃತ್ವದ ತಂಡ ಮುಂಬೈ ಬಳಿಯ ಕೇಂದ್ರಾಡಳಿತ ಪ್ರದೇಶವಾದ ದಮನ ಎಂಬಲ್ಲಿ ಬಂಧಿಸಿದೆ.
ಮೂಲತಃ ಕುಂದಾಪುರ ತಾಲೂಕಿನ ಮೂಡ್ಲಕಟ್ಟೆ ಪ್ರಸ್ತುತ ಮಹಾರಾಷ್ಟ್ರದಲ್ಲಿ ವಾಸವಿರುವ ವಿಜಯ್ (48) ಬಂಧಿತ ಆರೋಪಿ.
ಆರೋಪಿಯನ್ನು ತಂಡ ಮುಂಬೈಯಿಂದ ಕರೆತಂದು ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಲಯ ಆತನಿಗೆ ಮೇ 19ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.
ಬಂಧಿತ ಆರೋಪಿಯಿಂದ 24.4 ಗ್ರಾಂ ತೂಕದ ಒಂದು ಚಿನ್ನದ ಸರ, 38.6 ಗ್ರಾಂ ತೂಕದ ಕರಿಮಣಿ ಸರ, ಬೈಕ್, ಮೊಬೈಲ್ ಸಹಿತ ಒಟ್ಟು 3,25,500 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ವಿರುದ್ಧ ನವಾಗರ್ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳು ಹಾಗೂ ಮುಲುಂಡ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿವೆ.
ಪ್ರಕರಣದ ಇನ್ನೋರ್ವ ಆರೋಪಿ ಸತ್ಸಿಂಗ್ ವಿರಮ್ ಸಿಂಗ್ ಸಂದು ಅಲಿಯಾಸ್ ಬಬ್ಬು ಸರ್ದಾರ್ ಎಂಬಾತ ಬಂಧಿತನಾಗಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ತಿಳಿದುಬಂದಿದೆ.