ರೈತರ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ: ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ

ಡಾ. ರಾಜೇಂದ್ರ
ಮಂಗಳೂರು : ಜಿಲ್ಲೆಯ ರೈತರ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಡಳಿತದಿಂದ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ರೈತರಿಗೆ ಭರವಸೆ ನೀಡಿದರು.
ನಗರದ ಜಿಲ್ಲಾಧಿಕಾರಿಯ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ರೈತರ ಅಹವಾಲುಗಳಿಗೆ ಸಂಬಂಧಿಸಿದಂತೆ ಮಂಗಳವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಂಗಾರು ಆಗಮಿಸುತ್ತಿದೆ. ರೈತ ಸಂಪರ್ಕ ಕೇಂದ್ರದಿಂದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಸಲಾಗುವುದು, ಅಲ್ಲಿ ಕೊರತೆ ಆಗದಂತೆ ಎಚ್ಚರ ವಹಿಸಲಾಗಿದೆ. ಆದಾಗ್ಯೂ ಡಿಐಪಿ, ಯೂರಿಯಾ, ಗೊಬ್ಬರದ ಸಮಸ್ಯೆ ಕಂಡುಬಂದಲ್ಲಿ ರೈತರು ಹಾಗೂ ರೈತ ಸಂಘಟನೆಗಳು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಅಥವಾ ಸಹಾಯಕ ನಿರ್ದೇಶಕರಿಗೆ ನೇರವಾಗಿ ಕರೆ ಮಾಡಿ ವಿಷಯ ತಿಳಿಸಬಹುದಾಗಿದೆ ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸೀತಾ ಮಾತನಾಡಿ, ರಸಗೊಬ್ಬರದ ಕೊರತೆ ಕಂಡುಬಂದಲ್ಲಿ ತಕ್ಷಣ ಸಂಪರ್ಕಿಬಹುದು. ಒಂದು ಗಂಟೆಯೊಳಗೆ ರೈತರಿಗೆ ಗೊಬ್ಬರ ಹಾಗೂ ಬಿತ್ತನೆ ಬೀಜದ ಪೂರೈಸಲಾಗುವುದು ಎಂದರು.
ರಸಗೊಬ್ಬರ ದಾಸ್ತಾನು ಮಾಡುವ ಸಂದರ್ಭ ಚೀಲಕ್ಕೆ ಕೊಕ್ಕೆ ಹಾಕದಂತೆ ಎಚ್ಚರ ವಹಿಸಬೇಕು, 50 ಕೆ.ಜಿ ರಸಗೊಬ್ಬರದ ಚೀಲಕ್ಕೆ ಕಬ್ಬಿಣದ ಸಲಾಕೆಯ ಕೊಕ್ಕೆ ಹಾಕಿದ್ದಲ್ಲಿ ರಂಧ್ರದಿಂದ ಗೊಬ್ಬರ ಪೋಲಾಗುವ ಸಾಧ್ಯತೆ ಇದೆ. ಇಂತಹ ವಿಷಯಗಳಲ್ಲಿ ಕೃಷಿ ಇಲಾಖೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಬೆಳೆ ವಿಮೆಗೆ ಗೊತ್ತುಪಡಿಸಲಾದ ಬೆಳೆಗಳಿಗೆ ಬ್ಯಾಂಕ್ ಖಾತೆಗಳಿರುವ ಬ್ಯಾಂಕುಗಳೇ ಬೆಳೆ ವಿಮೆ ಮಾಡಿಕೊಡುತ್ತವೆ, ಸಾಲ ಪಡೆಯದ ರೈತರು ಕೂಡ ನೋಟಿಫೈಡ್ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಲು ಅರ್ಹರಿರುತ್ತಾರೆ, ರೈತರು ಇದರ ಪ್ರಯೋಜನ ಪಡೆಯಬೇಕು ಎಂದು ಡಿಸಿ ಮನವಿ ಮಾಡಿದರು.
ವಿವಿಧ ರೀತಿಯ ಬೆಳೆ ಇದ್ದರೂ ಬೆಳೆ ಸಮೀಕ್ಷೆ ವೇಳೆ ಕೇವಲ ಒಂದು ಬೆಳೆಯನ್ನು ಮಾತ್ರ ಆರ್ಟಿಸಿಯಲ್ಲಿ ನಮೂದಿಸಲಾಗುತ್ತಿದೆ, ಇದೂ ರೈತರಲ್ಲಿ ಗೊಂದಲವನ್ನುಂಟು ಮಾಡುತ್ತಿದೆ. ಕೃಷಿ ಇಲಾಖೆ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ರೈತರು ಮನವಿ ಮಾಡಿದರು.
ಜಿಲ್ಲೆಯ ಅಭಿವೃದ್ದಿ ಚಟುವಟಿಕೆಗಳಿಗೆ ರೈತರ ಸಹಕಾರವೂ ಅತ್ಯಗತ್ಯ. ಈ ನಿಟ್ಟಿನಲ್ಲಿ ಪವರ್ ಸ್ಟೇಷನ್ಗಳ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿಯನ್ನು ರೈತರು ನೀಡಬೇಕು. ಇಂತಹ ಸನ್ನಿವೇಶದಲ್ಲಿ ಸಂಬಂಧಿಸಿದ ರೈತರಿಗೆ ಸಾಧ್ಯವಾದಷ್ಟು ಹೆಚ್ಚಿನ ಪರಿಹಾರ ನೀಡಲು ಶಕ್ತಿಮೀರಿ ಯತ್ನಿಸಲಾಗುವುದು. ಸುಳ್ಯದ ಮಾಡಾವಿನಲ್ಲಿ ವರ್ಷದೊಳಗೆ ೧೧೦ ಕೆ.ವಿ. ಕೇಂದ್ರ ನಿರ್ಮಾಣವಾಗಲಿದೆ, ರೈತರು ಸಹಕರಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಕಳೆದ ಬಾರಿ ರೈತರಿಂದ ಭತ್ತ ಖರೀದಿಗೆ ಬೇಡಿಕೆಯಿತ್ತು, ಅದರಂತೆ ಖರೀದಿ ಕೇಂದ್ರಗಳನ್ನು ತೆರೆಯಲಾಯಿತು, ಆದರೆ ಯಾರೂ ಕೂಡ ಬೆಂಬಲ ಬೆಲೆಗೆ ಭತ್ತ ನೀಡಲಿಲ್ಲ, ಪ್ರಸಕ್ತ ಸಾಲಿನಲ್ಲೂ ಬೆಂಬಲ ಬೆಲೆಗೆ ಭತ್ತ ಖರೀದಿಸುವುದಿದ್ದರೆ ತಿಳಿಸಬಹುದು ಎಂದು ಡಿಸಿ ಸೂಚಿಸಿದರು.
ಜಿಲ್ಲೆಯ ಎಲ್ಲಾ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯುವಂತೆ ಸಲಹೆ ನೀಡಿದ ಜಿಲ್ಲಾಧಿಕಾರಿ, ಈ ಕಾರ್ಡ್ ಪಡೆಯಲು ಕಷ್ಟವಾದಲ್ಲಿ ಗ್ರಾಮ ಲೆಕ್ಕಾಧಿಕಾರಿ ಅಥವಾ ಪಿಡಿಒ ಅವರ ನೆರವು ಪಡೆಯಬಹುದು. ಕೆಲವು ಸಮಸ್ಯೆಗಳಿಂದಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯದ ರೈತರ ಪಟ್ಟಿ ನೀಡಿದರೆ ಅದನ್ನು ಸರಿಪಡಿಸಿಕೊಡಲಾಗುವುದು, ಈ ಬಗ್ಗೆ ಜಾಗೃತಿ ಮೂಡಿಸಲು ಐಇಸಿ ಚಟುವಟಿಕೆಗಳನ್ನು ಮತ್ತಷ್ಟು ಹಮ್ಮಿಕೊಳ್ಳಲಾಗುವುದು. ಅದೇ ರೀತಿ ರೈತರು ಕೂಡ ಮಹಾತ್ಮಾ ಗಾಂಧಿ ರಾಷ್ಟಿಯ ಗ್ರಾಮೀಣ ಉದ್ಯೋಗ ಖಾತ್ರಿ, ಪಿಎಂ. ಕಿಸಾನ್, ವಿದ್ಯಾನಿಧಿ ಯೋಜನೆಗಳ ಬಗ್ಗೆ ಪ್ರಚಾರ ಪಡಿಸುವಂತೆ ತಿಳಿಸಿದರು.
ದ.ಕ. ಜಿಪಂ ಸಿಇಒ ಡಾ. ಕುಮಾರ್, ಅಪರ ಜಿಲ್ಲಾಧಿಕಾರಿ ಡಾ. ಕೃಷ್ಣಮೂರ್ತಿ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಎಚ್.ಆರ್. ನಾಯಕ್, ಕೃಷಿ, ಪಶುಸಂಗೋಪನಾ ಇಲಾಖೆ, ಅರಣ್ಯ ಇಲಾಖೆ, ಮೆಸ್ಕಾಂನ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ರೈತ ಮುಖಂಡರಾದ ರೂಪೇಶ್ ರೈ, ಸಂಪತ್, ಆಲ್ವಿನ್, ಧನಕೀರ್ತಿ ಬಲಿಪ ಮತ್ತಿತರರು ಪಾಲ್ಗೊಂಡಿದ್ದರು.