ಟ್ರಂಪ್ ಮೇಲಿನ ಟ್ವಿಟರ್ ನಿರ್ಬಂಧ ತೆರವಿಗೆ ಸಿದ್ಧ: ಎಲಾನ್ ಮಸ್ಕ್
ವಾಷಿಂಗ್ಟನ್, ಮೇ 11: ಟ್ವಿಟರ್ ಖರೀದಿಯ ವ್ಯವಹಾರ ಪೂರ್ಣಗೊಂಡರೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಟ್ವಿಟ್ ವಿಧಿಸಿರುವ ನಿಷೇಧವನ್ನು ತಾನು ತೆರವುಗೊಳಿಸಬಹುದು ಎಂದು ಕೋಟ್ಯಾಧಿಪತಿ ಉದ್ಯಮಿ ಎಲಾನ್ ಮಸ್ಕ್ ಹೇಳಿದ್ದಾರೆ.
ಫೈನಾನ್ಶಿಯಲ್ ಟೈಮ್ಸ್ ಆಶ್ರಯದಲ್ಲಿ ನಡೆದ ‘ಫ್ಯೂಚರ್ ಆಫ್ ಕಾರ್ಸ್’ ಸಮಾವೇಶದಲ್ಲಿ ಮಾತನಾಡಿದ ಟೆಸ್ಲಾ ಸಿಇಒ ಮಸ್ಕ್, ಕಳೆದ ವರ್ಷ ಕ್ಯಾಪಿಟಲ್ ಹಿಲ್ಸ್ ದಂಗೆಯ ಬಳಿಕ ಟ್ರಂಪ್ರನ್ನು ನಿಷೇಧಿಸುವ ಟ್ವಿಟರ್ ನಿರ್ಧಾರ ತೀವ್ರ ಮೂರ್ಖತನದ ಮತ್ತು ನೈತಿಕವಾಗಿ ಕೆಟ್ಟ ನಿರ್ಧಾರವಾಗಿದೆ ಎಂದರು. ನಾನು ನಿಷೇಧ ಹಿಂಪಡೆಯಬಹುದು. ಆದರೆ ನಾನಿನ್ನೂ ಟ್ವಿಟರ್ನ ಮಾಲಕತ್ವ ಹೊಂದಿಲ್ಲ. ಆದ್ದರಿಂದ ಇದು ಖಂಡಿತ ನಡೆಯುತ್ತದೆ ಎಂದು ಈಗಲೇ ಹೇಳಲಾಗದು. ಟ್ರಂಪ್ ಅವರನ್ನು ಸಾಮಾಜಿಕ ಮಾಧ್ಯಮ ವೇದಿಕೆಯಿಂದ ನಿಷೇಧಿಸಿರುವುದು ನಾಗರಿಕರನ್ನು ದೂರ ಮಾಡಿದೆ ಮತ್ತು ಇದು ಸರಿಯಲ್ಲ. ಶಾಶ್ವತ ನಿಷೇಧವು ಟ್ವಿಟರ್ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಮೂಲಭೂತವಾಗಿ ದುರ್ಬಲಗೊಳಿಸುತ್ತದೆ ಎಂದು ಮಸ್ಕ್ ಹೇಳಿರುವುದಾಗಿ ವರದಿಯಾಗಿದೆ.
ಮಸ್ಕ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಟ್ವಿಟರ್ ಸಹಸ್ಥಾಪಕ ಮತ್ತು ಮಾಜಿ ಸಿಇಒ ಜಾಕ್ ಡೋರ್ಸೆ, ಬಳಕೆದಾರರ ಮೇಲೆ ಶಾಶ್ವತ ನಿಷೇದ ಸಲ್ಲದು ಎಂಬುದಕ್ಕೆ ತನ್ನ ಸಹಮತವಿದೆ. ಸಾಮಾನ್ಯವಾಗಿ ಶಾಶ್ವತ ನಿಷೇಧಗಳು ನಮ್ಮ ವೈಫಲ್ಯವಾಗಿವೆ ಮತ್ತು ಇದರಿಂದ ಏನೂ ಸಾಧ್ಯವಾಗದು ಎಂದು ಟ್ವೀಟ್ ಮಾಡಿದ್ದಾರೆ. 2021ರ ಜನವರಿ 14ರಂದು, ಟ್ರಂಪ್ ಅವರನ್ನು ನಿಷೇಧಿಸುವ ಟ್ವಿಟರ್ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದ ಡೋರ್ಸೆ, ಆದರೆ ಇಂತಹ ಕ್ರಮಗಳು ಅಪಾಯಕಾರಿ ಪೂರ್ವನಿದರ್ಶನಕ್ಕೆ ಕಾರಣವಾಗಲಿದೆ ಎಂದಿದ್ದರು.
ಖಾತೆಯನ್ನು ಅಮಾನತುಗೊಳಿಸುವ ನಿರ್ಧಾರವು ಆರೋಗ್ಯಕರ ಸಂವಾದಕ್ಕೆ ಉತ್ತೇಜನ ನೀಡುವಲ್ಲಿ ಸಂಸ್ಥೆಯ ವೈಫಲ್ಯವಾಗಿದೆ ಎಂದವರು ಹೇಳಿದ್ದರು. ಟ್ವಿಟರ್ ನಿಷೇಧದ ಸಂದರ್ಭ ಟ್ರಂಪ್ ಟ್ವಿಟರ್ನಲ್ಲಿ 89 ಮಿಲಿಯನ್ ಫಾಲೋವರ್ಸ್ ಹೊಂದಿದ್ದರು. ವಿಶ್ವದ ಅತೀ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಸುಮಾರು 44 ಬಿಲಿಯನ್ ಡಾಲರ್(3,36,910 ಕೋಟಿ ರೂ.ಗೂ ಅಧಿಕ) ಮೊತ್ತಕ್ಕೆ ಟ್ವಿಟರ್ ಅನ್ನು ಖರೀದಿಸಿದ್ದು, ಖರೀದಿ ಪ್ರಕ್ರಿಯೆ ಇನ್ನಷ್ಟೇ ಪೂರ್ಣಗೊಳ್ಳಬೇಕಿದೆ.