ಪಾಕಿಸ್ತಾನ: ತೀವ್ರ ಉಷ್ಣತೆಗೆ ಕರಗಿದ ಹಿಮಗಡ್ಡೆ; ಐತಿಹಾಸಿಕ ಹಸನ್ ಬಾದ್ ಸೇತುವೆ ಕುಸಿತ
ಇಸ್ಲಮಾಬಾದ್, ಮೇ 11: ಪಾಕಿಸ್ತಾನದ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರಾಂತದಲ್ಲಿನ ಐತಿಹಾಸಿಕ ಹಸನ್ಬಾದ್ ಸೇತುವೆ ಶನಿವಾರ ತೀವ್ರ ಪ್ರವಾಹದ ಹೊಡೆತಕ್ಕೆ ಸಿಲುಕಿ ಕುಸಿದಿದೆ ಎಂದು ವರದಿಯಾಗಿದೆ. ಈ ಪ್ರಾಂತದಲ್ಲಿ ಬೀಸಿದ ಭಾರೀ ಉಷ್ಣಮಾರುತದಿಂದ ಹಿಮಗಡ್ಡೆಯ ನೀರು ಕರಗಿ ಏಕಾಏಕಿ ಸರೋವರಕ್ಕೆ ನೀರು ನುಗ್ಗಿದಾಗ ಸೇತುವೆ ಕುಸಿದಿದೆ.
ಈ ಸಂದರ್ಭ ಹಲವಾರು ಪ್ರವಾಸಿಗರು ಹಾಗೂ ಸ್ಥಳೀಯರು ಅಲ್ಲಿದ್ದರು. ಗಾಯ ಅಥವಾ ಪ್ರಾಣಹಾನಿಯ ಬಗ್ಗೆ ಯಾವುದೇ ಮಾಹಿತಿ ದೊರಕಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಸರೋವರದಲ್ಲಿ ಏಕಾಏಕಿ ನೀರಿನ ಮಟ್ಟ ಏರುತ್ತಿರುವುದು, ನೀರಿನ ಹೊಡೆತಕ್ಕೆ ಸಿಲುಕಿ ಸೇತುವೆ ನಿಧಾನವಾಗಿ ಕುಸಿಯುತ್ತಾ ಕೆಳಗೆ ಬೀಳುತ್ತಿರುವ ವೀಡಿಯೊವನ್ನು ಪಾಕಿಸ್ತಾನದ ಹವಾಮಾನ ಬದಲಾವಣೆ ಇಲಾಖೆಯ ಸಚಿವ ಶೆರಿ ರೆಹ್ಮಾನ್ ಪೋಸ್ಟ್ ಮಾಡಿದ್ದಾರೆ.
ಪಾಕಿಸ್ತಾನದ ಉತ್ತರ ಭಾಗದಲ್ಲಿರುವ ಶಿಶ್ಪೆರ್ ಪರ್ವತದಲ್ಲಿರುವ ಶಿಶ್ಪರ್ ಹಿಮಗಡ್ಡೆ ಕರಗಿ ನೀರಾಗಿ ಪ್ರವಾಹೋಪಾದಿಯಲ್ಲಿ ಹರಿದು ಬಂದ ಕಾರಣ ಕಾರಕೋರಂ ಹೆದ್ದಾರಿಯ ಈ ಸೇತುವೆ ಕುಸಿದಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಚಾರಿತ್ರಿಕ ಸೇತುವೆಯ ಕಾಂಕ್ರಿಟ್ ಸ್ಥಂಭಗಳನ್ನು ಪ್ರವಾಹದ ಅಲೆಗಳು ಅಪ್ಪಳಿಸಿದ ಬಳಿಕ ಸೇತುವೆ ಕುಸಿದಿದೆ. ದುರಂತದ ಬಳಿಕ ಈ ಮಾರ್ಗದ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹಿಮನದಿ ಪ್ರವಾಹದಿಂದ 2 ಜಲವಿದ್ಯುತ್ ಯೋಜನೆ, ಅದಕ್ಕೆ ಹೊಂದಿಕೊಂಡ ಮನೆಗಳು, ಅಪಾರ ಪ್ರಮಾಣದ ಕೃಷಿ ಭೂಮಿ, ನೀರು ಪೂರೈಕೆ ವ್ಯವಸ್ಥೆಯೂ ಕೊಚ್ಚಿಕೊಂಡು ಹೋಗಿದೆ. ರಸ್ತೆ ಸಂಚಾರ ಪುನರಾರಂಭಿಸಲು ತಾತ್ಕಾಲಿಕ ಸೇತುವೆ ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಪಾಕಿಸ್ತಾನದಲ್ಲಿ ಈ ವರ್ಷದ ಎಪ್ರಿಲ್ನಲ್ಲಿ ಗರಿಷ್ಟ ತಾಪಮಾನ ದಾಖಲಾಗಿದ್ದು 49 ಡಿಗ್ರಿ ಸೆಲ್ಶಿಯಸ್ಗೆ ತಲುಪಿದೆ. ದೇಶದ ಹಲವು ಭಾಗಗಳಲ್ಲಿ ತಾಪಮಾನ ಏರಿಕೆಯ ಸಮಸ್ಯೆ ಬಿಗಡಾಯಿಸಬಹುದು ಎಂದು ಸಚಿವ ರೆಹ್ಮಾನ್ ಎಚ್ಚರಿಕೆ ನೀಡಿದ್ದಾರೆ.







