ಚಿತ್ರಹಿಂಸೆ: ಇಂಟರ್ಪೋಲ್ ನ ಯುಎಇ ಅಧ್ಯಕ್ಷರ ವಿರುದ್ಧ ಪ್ರಕರಣದ ವಿಚಾರಣೆ ಆರಂಭ
ಪ್ಯಾರಿಸ್, ಮೇ 11: ಚಿತ್ರಹಿಂಸೆ ಮತ್ತು ಅನಿಯಂತ್ರಿತ ಬಂಧನದ ಆರೋಪದ ಹಿನ್ನೆಲೆಯಲ್ಲಿ ಇಂಟರ್ಪೋಲ್ನ ಯುಎಇ ಅಧ್ಯಕ್ಷ ಅಹ್ಮದ್ ನಾಸೆರ್ ಅಲ್ರೈಸಿ ವಿರುದ್ಧದ ಪ್ರಕರಣದಲ್ಲಿ ಫ್ರಾನ್ಸ್ನ ಅಧಿಕಾರಿಗಳು ವಿಚಾರಣೆ ಆರಂಭಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ತಮ್ಮನ್ನು ಯುಎಇಯಲ್ಲಿ ಬಂಧಿಸಿ ಚಿತ್ರಹಿಂಸೆ ನೀಡಲಾಗಿದೆ ಎಂದು ಆರೋಪಿಸಿ ಬ್ರಿಟನ್ನ ಇಬ್ಬರು ಪ್ರಜೆಗಳು ಸಲ್ಲಿಸಿದ ದೂರಿನ ಬಳಿಕ ಪ್ರಕರಣ ದಾಖಲಿಸಿ ವಿಚಾರಣೆ ಆರಂಭಿಸಲಾಗಿದೆ ಎಂದು ವರದಿಯಾಗಿದೆ. ಯುಎಇಯಲ್ಲಿ ಇದ್ದ ಸಂದರ್ಭ ತಮ್ಮನ್ನು ಅನಿಯಂತ್ರಿತ ಬಂಧನ ಮತ್ತು ಚಿತ್ರಹಿಂಸೆಗೆ ಗುರಿಪಡಿಸಲಾಗಿದೆ. ಆ ಸಂದರ್ಭ ಆಂತರಿಕ ಸಚಿವಾಲಯದ ಉನ್ನತ ಭದ್ರತಾಧಿಕಾರಿಯಾಗಿದ್ದ ಅಲ್ರೈಸಿ ಇದಕ್ಕೆ ಜವಾಬ್ದಾರರಾಗಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಬ್ರಿಟನ್ನ ಮ್ಯಾಥ್ಯೂ ಹೆಜಸ್ ಮತ್ತು ಅಲಿ ಇಸ್ಸಾ ಅಹ್ಮದ್ ದೂರು ನೀಡಿದ್ದರು.
ಈ ಪ್ರಕರಣವನ್ನು ಫ್ರಾನ್ಸ್ನ ಭಯೋತ್ಪಾದನಾ ವಿರೋಧಿ ಅಭಿಯೋಜಕರು ನಿರ್ವಹಿಸುತ್ತಿದ್ದು ತನಿಖಾ ನ್ಯಾಯಾಧೀಶರು ಆರೋಪ ಹೊರಿಸಬೇಕೇ ಎಂಬುದನ್ನು ನಿರ್ಧರಿಸಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ. ನವೆಂಬರ್ನಲ್ಲಿ ಇಂಟರ್ಪೋಲ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅಲ್ರೈಸಿಗೆ ಫ್ರಾನ್ಸ್ನಲ್ಲಿ ಕಾನೂನು ಕ್ರಮದಿಂದ ರಾಜತಾಂತ್ರಿಕ ವಿನಾಯಿತಿ ಹೊಂದಿದ್ದಾರೆಯೇ ಎಂಬುದನ್ನು ತನಿಖಾ ನ್ಯಾಯಾಧೀಶರು ನಿರ್ಧರಿಸಲಿದ್ದಾರೆ.
ಸಾರ್ವತ್ರಿಕ ನ್ಯಾಯವ್ಯಾಪ್ತಿಯ ಆಧಾರದಲ್ಲಿ ದೂರನ್ನು ಸಲ್ಲಿಸಿದ್ದು, ಇದು ವಿದೇಶಿ ನೆಲದಲ್ಲಿ ಎಸಗಿದ್ದರೂ ಸಹ ಗಂಭೀರ ಅಪರಾಧಗಳ ವಿರುದ್ಧ ಕಾನೂನು ಕ್ರಮ ಜರಗಿಸಲು ದೇಶಗಳಿಗೆ ಅವಕಾಶ ನೀಡುತ್ತದೆ. ಇದೀಗ ರೈಸಿ ವಿರುದ್ಧ ವಿಚಾರಣೆ ಆರಂಭವಾಗಿರುವುದರಿಂದ, ಇದೀಗ ತನಿಖಾ ನ್ಯಾಯಾಧೀಶರ ಹಂತಕ್ಕೆ ತಲುಪಿದೆ. ಇದರರ್ಥ, ಒಂದು ವೇಳೆ ಅಲ್ರೈಸಿ, ಫ್ರಾನ್ಸ್ ನ ಲಿಯೋನ್ ನಗರದಲ್ಲಿರುವ ಇಂಟರ್ಪೋಲ್ ಪ್ರಧಾನ ಕಚೇರಿಗೆ ಭೇಟಿ ನೀಡಿದರೆ, ವಿಚಾರಣೆ ನಡೆಸಲು ಅವರನ್ನು ಬಂಧಿಸುವ ಸಾಧ್ಯತೆಯೂ ಇದೆ. ಮಾರ್ಚ್ನಲ್ಲಿ ಪ್ರಕರಣದ ವಿಚಾರಣೆ ಆರಂಭವಾಗಿದ್ದು ತನಿಖಾ ಮ್ಯಾಜಿಸ್ಟ್ರೇಟ್ ಎದುರು ಹೇಳಿಕೆ ದಾಖಲಿಸಲು ಇಬ್ಬರೂ ಫಿರ್ಯಾದಿಗಳು ಬುಧವಾರ ಪ್ಯಾರಿಸ್ ತಲುಪಿದ್ದಾರೆ ಎಂದು ವರದಿಯಾಗಿದೆ.