ಶೂನ್ಯ ಕೋವಿಡ್ ನೀತಿಯ ಕುರಿತ ಡಬ್ಲ್ಯುಎಚ್ಒ ಮುಖ್ಯಸ್ಥರ ಹೇಳಿಕೆಗೆ ಚೀನಾ ಇದಿರೇಟು
ಬೀಜಿಂಗ್, ಮೇ 11: ಚೀನಾ ಅನುಸರಿಸುತ್ತಿರುವ ಕಟ್ಟುನಿಟ್ಟಿನ ಮತ್ತು ನೋವಿನಿಂದ ಕೂಡಿದ ‘ಶೂನ್ಯ ಕೋವಿಡ್’ ಕಾರ್ಯನೀತಿ ಸಮರ್ಥನೀಯವಲ್ಲ ಎಂಬ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಚೀನಾ, ಇದು ಅತ್ಯಂತ ಬೇಜವಾಬ್ದಾರಿಯ ಹೇಳಿಕೆ ಎಂದಿದೆ. ಸಂಬಂಧಿತ ವ್ಯಕ್ತಿಯು ಚೀನಾದ ಕೋವಿಡ್ ನೀತಿಯನ್ನು ವಸ್ತುನಿಷ್ಟವಾಗಿ ಮತ್ತು ತರ್ಕಬದ್ಧವಾಗಿ ವೀಕ್ಷಿಸಬಹುದು ಮತ್ತು ಬೇಜಬಾಬ್ದಾರಿ ಟೀಕೆಗಳನ್ನು ಮಾಡುವ ಬದಲು ಸತ್ಯಗಳನ್ನು ತಿಳಿದುಕೊಳ್ಳಬಹುದು ಎಂದು ನಾವು ಭಾವಿಸುತ್ತೇವೆ’ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಝಾವೊ ಲಿಜಿಯನ್ ಹೇಳಿದ್ದಾರೆ.
ಶೂನ್ಯ ಕೋವಿಡ್ ನೀತಿಯ ಅನುಸಾರ ಹಲವು ನಗರಗಳಲ್ಲಿ ಅದರಲ್ಲೂ ಪ್ರಮುಖವಾಗಿ ವಾಣಿಜ್ಯ ಕೇಂದ್ರ ಶಾಂಘೈಯಲ್ಲಿ ನೂರಾರು ಮಿಲಿಯನ್ ಜನರ ಚಲನವಲನದ ಮೇಲೆ ಹಲವು ವಿಧದ ನಿರ್ಬಂಧ ವಿಧಿಸಲಾಗಿದೆ. ಇದರಿಂದ ಚೀನಾದಲ್ಲಿ ಗಮನಾರ್ಹ ಆರ್ಥಿಕ ಹಾನಿಯ ಜತೆಗೆ ವ್ಯಾಪಕ ಹತಾಶೆಗೆ ಕಾರಣವಾಗಿದೆ. ಕಳೆದ 6 ವಾರದಿಂದ ಸಂಪೂರ್ಣ ಲಾಕ್ಡೌನ್ ಜಾರಿಯಲ್ಲಿರುವ ಶಾಂಘೈಯಲ್ಲಿ ಅರ್ಧದಷ್ಟು ನಗರ ಶೂನ್ಯ ಕೋವಿಡ್ ಗುರಿ ಸಾಧಿಸಿದೆ. ಆದರೂ ಕಠಿಣ ನಿರ್ಬಂಧ ಮುಂದುವರಿಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಿರ್ಬಂಧದ ವಿಷಯದಲ್ಲಿ ರಾಜಿ ಮಾಡಿಕೊಳ್ಳದ ಚೀನಾದ ಧೋರಣೆ, ಕೋವಿಡ್ ಸೋಂಕಿನ ಜತೆಗೇ ಬದುಕುವ ವಿಶ್ವದ ಇತರ ದೇಶಗಳ ಧೋರಣೆಗೆ ವ್ಯತಿರಿಕ್ತವಾಗಿದೆ. ಸರಕಾರದ ಕಾರ್ಯನೀತಿಯ ಬಗ್ಗೆ ಮಂಗಳವಾರ ಅಪರೂಪದ ಸಾರ್ವಜನಿಕ ಪ್ರತಿಕ್ರಿಯೆ ನೀಡಿದ್ದ ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರೋಸ್ ಅಧನಾಮ್ ಘೆಬ್ರಯೇಸಸ್, ಚೀನಾದ ಶೂನ್ಯ ಕೋವಿಡ್ ನೀತಿ ಖಂಡಿತಾ ಸಮರ್ಥನೀಯವಲ್ಲದ ಕಾರ್ಯತಂತ್ರವಾಗಿದೆ ಮತ್ತು ಈ ಧೋರಣೆ ಬದಲಿಸಲು ಇದು ಸಕಾಲವಾಗಿದೆ ಎಂದಿದ್ದರು.
ಈ ಹೇಳಿಕೆಯನ್ನು ಚೀನಾದ ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆಗಳು ವರದಿ ಮಾಡಿಲ್ಲ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಈ ಹೇಳಿಕೆಯನ್ನು ಸೆನ್ಸಾರ್ ಮಾಡಿದ್ದು ವಿದೇಶ ವ್ಯವಹಾರ ಇಲಾಖೆಯ ಸುದ್ಧಿಗೋಷ್ಟಿಯಲ್ಲಿ ಸರಕಾರದ ಪ್ರತಿಕ್ರಿಯೆಯನ್ನು ಮಾತ್ರ ಪ್ರಕಟಿಸಲಾಗಿದೆ. ಶೂನ್ಯ ಕೋವಿಡ್ ಕಾರ್ಯನೀತಿಯನ್ನು ಟೀಕಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಚೀನಾ ಮುಖಂಡರು ಕಳೆದ ವಾರ ಎಚ್ಚರಿಸಿದ್ದರು. ಶೂನ್ಯ ಕೋವಿಡ್ ನೀತಿಯನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿರುವ ಚೀನಾ, ಕೋವಿಡ್ ಸೋಂಕಿನಿಂದ ಇತರ ದೇಶಗಳಲ್ಲಿ ಮಿಲಿಯಾಂತರ ಜನತೆ ಸಾವಿಗೀಡಾಗಿದ್ದಾರೆ.
ಅಮೆರಿಕದಲ್ಲಿ ಸುಮಾರು 1 ಮಿಲಿಯನ್ ಜನ ಸೋಂಕಿನಿಂದ ಮೃತರಾಗಿದ್ದಾರೆ. ಆದರೆ ತನ್ನ ವುಹಾನ್ ನಗರದಲ್ಲಿ ಸೋಂಕಿನಿಂದ ಮೃತರ ಸಂಖ್ಯೆ ಸುಮಾರು 5 ಸಾವಿರ ಮಾತ್ರ ಎಂದು ಹೇಳಿದೆ. ಈ ಮಧ್ಯೆ, ಘೆಬ್ರಿಯೇಸಸ್ ಅವರ ಹೇಳಿಕೆಯನ್ನು ಚೀನಾದ ಸಾಮಾಜಿಕ ಮಾಧ್ಯಮ ವೇದಿಕೆ ವೀಬೊದಲ್ಲಿ ಪೋಸ್ಟ್ ಮಾಡಿದ ಕೆಲ ಹೊತ್ತಿನಲ್ಲೇ ಅದನ್ನು ತೆಗೆಯಲಾಗಿದೆ. ನಿಯಮವನ್ನು ಉಲ್ಲಂಘಿಸಿರುವ ಕಾರಣ ಈ ಹೇಳಿಕೆಯನ್ನು ಶೇರ್ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಮತ್ತೊಂದು ಸಾಮಾಜಿಕ ಮಾಧ್ಯಮ ವೇದಿಕೆ ವಿ ಚ್ಯಾಟ್ ಪ್ರಕಟಿಸಿದೆ.
ಇದು ತನ್ನ ಶೂನ್ಯ ಕೋವಿಡ್ ಕಾರ್ಯನೀತಿಯನ್ನು ಪ್ರಶ್ನಿಸುವವರ ಬಗ್ಗೆ ಚೀನಾ ಹೊಂದಿರುವ ಶೂನ್ಯ ಸಹಿಷ್ಣುತೆಯನ್ನು ತೋರಿಸುತ್ತದೆ. ಈ ವಿಷಯವನ್ನು ಸಂಪೂರ್ಣ ರಾಜಕೀಯಗೊಳಿಸಲಾಗಿದೆ ಮತ್ತು ಯಾವುದೇ ಭಿನ್ನಾಭಿಪ್ರಾಯದ ಹೇಳಿಕೆಯನ್ನು ಉನ್ನತ ನಾಯಕತ್ವಕ್ಕೆ ಸವಾಲು ಎಂದು ಪರಿಗಣಿಸಲಾಗುತ್ತದೆ ಎಂದು ಹಾಂಕಾಂಗ್ನ ಚೀನಾ ವಿವಿಯ ಸಂಶೋಧಕ ಫಾಂಗ್ ಕೆಚೆಂಗ್ ಹೇಳಿದ್ದಾರೆ.