ಬೆಂಗಳೂರು: ಮೇ 13ರಿಂದ ಚರ್ಮ ಕರಕುಶಲ ವಸ್ತು ಪ್ರದರ್ಶನ, ಸಮಾವೇಶ
ಬೆಂಗಳೂರು, ಮೇ 12: ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ಸಹಯೋಗದೊಂದಿಗೆ (ಮೇ 13) ಐದು ದಿನಗಳ ಕಾಲ ರಾಜ್ಯ ಮಟ್ಟದ ಚರ್ಮ ಕುಶಲ ಕರ್ಮಿಗಳ ಸಮಾವೇಶ ಹಾಗೂ ಚರ್ಮ ಕರಕುಶಲ ವಸ್ತು ಪ್ರದರ್ಶನ ಮತ್ತು ಮಾರಾಟ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಉದ್ಘಾಟಿಸಲಿದ್ದಾರೆ.
ಗುರುವಾರ ನಗರದಲ್ಲಿಂದು ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಿಗಮದ ಅಧ್ಯಕ್ಷ ಪ್ರೊ.ಎನ್.ಲಿಂಗಣ್ಣ, ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿ ಮೈದಾನದಲ್ಲಿ ಮೇ 13ರಿಂದ 17ರವರೆಗೂ ಈ ಪ್ರದರ್ಶನ ನಡೆಯಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದು, ಸಚಿವರಾದ ಗೋವಿಂದ ಎಂ.ಕಾರಜೋಳ, ಕೋಟ ಶ್ರೀನಿವಾಸ ಪೂಜಾರಿ, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಶಿ, ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದರು.
ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ನಟರಾಜ್ ಮಾತನಾಡಿ, ಐದು ದಿನಗಳ ಕಾಲ ನಡೆಯುವ ಈ ಸಮಾವೇಶದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಮೇಳದಲ್ಲಿ 100ಕ್ಕೂ ಅಧಿಕ ಮಳಿಗೆಗಳಿದ್ದು, ಬೃಹತ್ ಮಾರಾಟ ಮೇಳ ನಡೆಯಲಿದೆ. ಜತೆಗೆ, ರಾಜ್ಯದೆಲ್ಲೆಡೆ ಚರ್ಮೋದ್ಯೋಗದಲ್ಲಿ ತೊಡಗಿರುವ ಕನಿಷ್ಠ 5 ಸಾವಿರ ಕುಶಲಕರ್ಮಿಗಳನ್ನು ಆಹ್ವಾನಿಸಲಾಗಿದೆ. ಅತ್ಯುತ್ತಮ ಪಾದರಕ್ಷೆ ವಿನ್ಯಾಸ ಮಾಡುವ ಚರ್ಮೋದ್ಯೋಗಿಗೆ ‘ಚರ್ಮಶಿಲ್ಪಿ’ ಪ್ರಶಸ್ತಿ ಪ್ರದಾನಿಸಲಾಗುವುದು ಎಂದರು.
ಅಲ್ಲದೆ, ಲಿಡ್‍ಕರ್ ಬ್ರಾಂಡ್ ಮೌಲ್ಯವನ್ನು ವೃದ್ಧಿಗೊಳಿಸುವುದು. ಜಿಲ್ಲಾವಾರು ಮಳಿಗೆ ತೆರೆಯಲು ಅವಕಾಶ, ಮಾರುಕಟ್ಟೆ ಒದಗಿಸುವ ಏಜೆನ್ಸಿಗಳನ್ನು ಪರಿಚಯಿಸುವುದು ಸೇರಿದಂತೆ ಮುಂದಿನ ದಿನಗಳಲ್ಲಿ ಚರ್ಮೋದ್ಯೋಗಿಗಳ ಪ್ರಗತಿಗೆ ಹೊಸ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಮಾಹಿತಿ ನೀಡಿದರು.







