ಸಾವಿರಾರು ಫೆಲೆಸ್ತೀನಿಯರ ಉಪಸ್ಥಿತಿಯಲ್ಲಿ ಅಲ್ಜಝೀರಾ ಪತ್ರಕರ್ತೆಯ ಅಂತ್ಯಕ್ರಿಯೆ
ರಮಲ್ಲಾ: ಶಿರೀನ್ ಅಬು ಅಕಲೇಹ್ಗೆ ಕಣ್ಣೀರ ವಿದಾಯ
![ಸಾವಿರಾರು ಫೆಲೆಸ್ತೀನಿಯರ ಉಪಸ್ಥಿತಿಯಲ್ಲಿ ಅಲ್ಜಝೀರಾ ಪತ್ರಕರ್ತೆಯ ಅಂತ್ಯಕ್ರಿಯೆ ಸಾವಿರಾರು ಫೆಲೆಸ್ತೀನಿಯರ ಉಪಸ್ಥಿತಿಯಲ್ಲಿ ಅಲ್ಜಝೀರಾ ಪತ್ರಕರ್ತೆಯ ಅಂತ್ಯಕ್ರಿಯೆ](https://www.varthabharati.in/sites/default/files/images/articles/2022/05/12/334934-1652375645.jpg)
Photo: Twitter/@chehayebk
ರಮಲ್ಲಾ, ಮೇ 12 : ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ಸೈನಿಕರಿಂದ ಹತ್ಯೆಗೀಡಾದ ಅಲ್ಜಝೀರಾ ಪತ್ರಕರ್ತೆ ಶಿರೀನ್ ಅಬು ಅಕಲೇಹ್ ಅವರ ಪಾರ್ಥಿವಶರೀರದ ಅಂತ್ಯಕ್ರಿಯೆ ರಮಲ್ಲಾ ನಗರದಲ್ಲಿ ಗುರುವಾರ ಮಧ್ಯಾಹ್ನ ನೆರವೇರಿತು. ಅಂತ್ಯಕ್ರಿಯೆಯಲ್ಲಿ ಸಾವಿರಾರು ಫೆಲೆಸ್ತೀನಿಯರು ಪಾಲ್ಗೊಂಡು, ತಮ್ಮ ಯಾತನೆಗಳ ಬಗ್ಗೆ ಜಗತ್ತಿನ ಗಮನಸೆಳೆದ ದಿಟ್ಟ ಪತ್ರಕರ್ತೆಗೆ ಕಣ್ಣೀರ ವಿದಾಯ ಹೇಳಿದರು.
ಪೆಲೆಸ್ತೀನ್ ಪ್ರಾಧಿಕಾರದ ಅಧ್ಯಕ್ಷೀಯ ಆವರಣದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಶಿರೀನ್ ಅವರ ಪಾರ್ಥಿವ ಶರೀರವನ್ನು ಗುರುವಾರ ಮಧ್ಯಾಹ್ನ ದಫನಗೊಳಿಸಲಾಯಿತು. ಬುಧವಾರ ಬೆಳಗ್ಗೆ ಜೆನಿನ್ ನಗರದಲ್ಲಿ ಇಸ್ರೇಲ್ ಸೇನೆ ನಡೆಸಿದ ದಾಳಿ ಕಾರ್ಯಾಚರಣೆಯ ವರದಿ ಮಾಡುತ್ತಿದ್ದ ಸಂದರ್ಭದಲ್ಲಿ ಅಬು ಅಕಲೇಹ್ ಅವರನ್ನು ಇಸ್ರೇಲಿ ಸೈನಿಕರು ಗುಂಡಿಕ್ಕಿ ಹತ್ಯೆಗೈದಿದ್ದರು.
ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಫೆಲೆಸ್ತೀನ್ ಅಧ್ಯಕ್ಷ ಅಬ್ಬಾಸ್ ಅವರು ಅಗಲಿದ ಪತ್ರಕರ್ತೆಗೆ ಶ್ರದ್ಧಾಂಜಲಿ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಅಬ್ಬಾಸ್ ಅವರು ಮಾತನಾಡಿ ಅಬು ಅಕಲೇಹ್ ಅವರ ನಿಧನಕ್ಕೆ ಇಸ್ರೇಲ್ ಸಂಪೂರ್ಣವಾಗಿ ಹೊಣೆಗಾರನಾಗಿದೆ ಎಂದು ಹೇಳಿತು. ಶಿರೀನ್ ಅಬು ಅಕಲೇಹ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅಬು ಅಕಲೇಹ್ ಜೊತೆ ಜಂಟಿ ತನಿಖೆ ನಡೆಸುವುದನ್ನು ನಾವು ತಿರಸ್ಕರಿಸುತ್ತೇನೆ ಎಂದು ಹೇಳಿದರು. ಪತ್ರಕರ್ತೆಯ ಸಾವಿಗೆ ನ್ಯಾಯ ಕೇಳಿ ಫೆಲೆಸ್ತೀನ್ ಅಧಿಕಾರಿಗಳು ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಲೇರಲಿದ್ದಾರೆ ಎಂದು ಅವರು ತಿಳಿಸಿದರು.
ಶಿರೀನ್ ಅಬು ಅಕಲೇಹ್ ಅವರ ಹತ್ಯೆಯು ಫೆಲೆಸ್ತೀನ್ ಹಾಗೂ ಅರಬ್ ಜಗತ್ತಿನಲ್ಲಿ ಆಘಾತದ ಅಲೆಗಳನ್ನು ಸೃಷ್ಟಿಸಿದೆ. 51 ವರ್ಷ ವಯಸ್ಸಿನ ಹಿರಿಯ ಪತ್ರಕರ್ತೆ ಶಿರೀನ್ ಅವರು ಅಲ್ಜಝೀರಾ ಅರೇಬಿಕ್ ಸುದ್ದಿವಾಹಿನಿಯ ವರದಿಗಾರರಾಗಿದ್ದರು. 1997ರಲ್ಲಿ ಅಲ್ಜಝೀರಾ ಆರಂಭಗೊಂಡ ಒಂದು ವರ್ಷದ ಬಳಿಕ ಅವರು ಅಲ್ಲಿ ವರದಿಗಾರ್ತಿಯಾಗಿ ಸೇರ್ಪಡೆಗೊಂಡಿದ್ದರು.
2000ನೇ ಇಸವಿಯಲ್ಲಿ ಇಸ್ರೇಲ್ ಅತಿಕ್ರಮಣದ ವಿರುದ್ಧ ಫೆಲೆಸ್ತೀನಿಯರು ನಡೆಸಿದ ದ್ವಿತೀಯ ಇಂತಿಫದಾ ಹೋರಾಟದ ಸಂದರ್ಭ ಇಸ್ರೇಲ್ ಸೈನಿಕರು ಪಶ್ಚಿಮದಂಡೆಯ ವಿವಿಧ ನಗರಗಳಲ್ಲಿ ನಡೆಸಿದ ದೌರ್ಜನ್ಯಗಳ ಕುರಿತ ದಿಟ್ಟ ವರದಿಗಾರಿಕೆಗಾಗಿ ಫೆಲೆಸ್ತೀನಿಯರ ಗೌರವಾದರಕ್ಕೆ ಪಾತ್ರರಾಗಿದ್ದರು.
ಇದಕ್ಕೂ ಮುನ್ನ ರಾಷ್ಟ್ರೀಯ ಕಾವಲುದಳವು ಶಿರಿನ್ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆಯನ್ನು ನಡೆಸಿತು. ಈ ಮಧ್ಯೆ ಇಸ್ರೇಲ್ ನ ಸೇನಾ ವರಿಷ್ಠ ಲೆ.ಜ. ಅವಿವ್ ಕೊಚಾವಿ ಹೇಳಿಕೆ ನೀಡಿ, ಶಿರೀನ್ ಅವರನ್ನು ಯಾರು ಗುಂಡಿಕ್ಕಿದ್ದಾರೆಂದು ಇನ್ನೂ ಸ್ಪಷ್ಟವಾಗಿಲ್ಲವೆಂದು ಹೇಳಿದ್ದಾರೆ.