10ನೇ ಬಾರಿಗೆ ಎವರೆಸ್ಟ್ ಆರೋಹಣ: ತನ್ನ ದಾಖಲೆಯನ್ನೇ ಮುರಿದ ನೇಪಾಳಿ ಮಹಿಳೆ ಲಕ್ಪಾ ಶೆರ್ಪಾ
Photo: Twitter/@_Matt_Marshall
ಕಠ್ಮಂಡು,ಮೇ 12: ಜಗತ್ತಿನ ಅತ್ಯುನ್ನತ ಶಿಖರವಾದ ಎವರೆಸ್ಟ್ ಅನ್ನು 10ನೇ ಬಾರಿಗೆ ಏರುವ ಮೂಲಕ ನೇಪಾಳಿ ಮೂಲದ ಶೆರ್ಪಾ ಮಹಿಳೆಯೊಬ್ಬರು ತನ್ನ ಹಿಂದಿನ ದಾಖಲೆಯನ್ನು ತಾನೇ ಮುರಿದಿದ್ದಾರೆ. ಗರಿಷ್ಠ ಬಾರಿ ಎವರೆಸ್ಟ್ ಶಿಖರ ಏರಿರುವ ಮಹಿಳೆಯೆಂಬ ದಾಖಲೆಗೆ 48 ವರ್ಷ ವಯಸ್ಸಿನ ಲಕ್ಪಾ ಶೆರ್ಪಾ ಅವರು ಪಾತ್ರರಾಗಿದ್ದಾರೆ.
ಲಕ್ಪಾ ಶೆರ್ಪಾ ಹಾಗೂ ಇತರ ಹಲವಾರು ಮಂದಿ ಗುರುವಾರ ಬೆಳಗ್ಗೆ ಅನುಕೂಲಕರವಾದ ಹವಾಮಾನದ ಪ್ರಯೋಜನ ಪಡೆದು 8849 ಮೀಟರ್ ಎತ್ತರ ಎವರೆಸ್ಟ್ ಶೃಂಗವನ್ನು ಏರಿದ್ದಾರೆಂದು ಎಂದು ಆಕೆಯ ಸಹೋದರ ಹಾಗೂ ಶಿಖರಾರೋಹಣದ ಸಂಘಟಕ ಮಿಂಗ್ಮಾ ಗೆಲು ತಿಳಿಸಿದ್ದಾರೆ. ಲುಕ್ಮಾ ಅವರು ಉತ್ತಮ ಆರೋಗ್ಯದಿಂದಿದ್ದಾರೆ ಹಾಗೂ ಶಿಖರದಿಂದ ಸುರಕ್ಷಿತವಾಗಿ ಅವರೋಹಣಗೈಯುತ್ತಿದ್ದಾರೆಂದುಗೆಲು ಹೇಳಿದ್ದಾರೆ.
ಮೂಲತಃ ನೇಪಾಳದವರಾದ ಲುಕ್ಪಾ ಶೆರ್ಪಾ ಅವರು ಪ್ರಸಕ್ತ ಅಮೆರಿಕದ ಕನೆಕ್ಟಿಕಟ್ ರಾಜ್ಯದ ಹಾರ್ಟ್ಫೋರ್ಡ್ನಲ್ಲಿ ತನ್ನ ಮೂವರು ಮಕ್ಕಳೊಂದಿಗೆ ನೆಲೆಸಿದ್ದಾರೆ. ಇನ್ನೋರ್ವ ನೇಪಾಳಿ ಶೆರ್ಪಾ ಪುರುಷ ಪರ್ವತಾರೋಹಿ ಗೈಡ್ ಕಮಿ ರಿತಾ ಅವರು 26ನೇ ಬಾರಿಗೆ ಎವರೆಸ್ಟ್ ಶಿಖರವನ್ನು ಶನಿವಾರ ಏರಿದ್ದರು. ಆ ಮೂಲಕ ಗರಿಷ್ಠ ಬಾರಿ ಎವರೆಸ್ಟ್ ಶಿಖರ ಏರಿದ ಪುರುಷ ಪರ್ವತಾರೋಹಿ ಎಂಬ ಅವರದೇ ದಾಖಲೆಯನ್ನು ಮುರಿದಿದ್ದಾರೆ.