ಶ್ರೀಲಂಕಾದ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ರಾನಿಲ್ ವಿಕ್ರಮಸಿಂಘೆ
Photo: Twitter
ಕೊಲಂಬೋ: ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಆಡಳಿತ ವಿರೋಧಿ ಹಿಂಸಾತ್ಮಕ ಪ್ರತಿಭಟನೆಗಳ ಬಳಿಕ ವಿರೋಧ ಪಕ್ಷದ ನಾಯಕ ರಾನಿಲ್ ವಿಕ್ರಮಸಿಂಘೆ ದೇಶದ ಹೊಸ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಬುಧವಾರ ಸಂಜೆ ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ಮತ್ತು ರಾನಿಲ್ ವಿಕ್ರಮಸಿಂಘೆ ನಡುವೆ ನಡೆದ ಸುದೀರ್ಘ ಮಾತುಕತೆ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಗುರುವಾರ ಸಂಜೆ 6:30 ರ ಮಹಿಂದಾ ರಾಜಪಕ್ಸೆ ರಾಜೀನಾಮೆ ನೀಡಿದ ಬಳಿಕ ತೆರವಾದ ಹುದ್ದೆಗೆ ರನಿಲ್ ವಿಕ್ರಮಸಿಂಘೆ ಪ್ರಮಾಣ ವಚನ ಸ್ವೀಕರಿಸಿದರು.
1994 ರಿಂದ ಯುನೈಟೆಡ್ ನ್ಯಾಶನಲ್ ಪಕ್ಷದ ಮುಖ್ಯಸ್ಥರಾಗಿ ರಾನಿಲ್ ವಿಕ್ರಮಸಿಂಘೆ ಅವರು ಐದನೇ ಬಾರಿ ಶ್ರೀಲಂಕಾದ ಪ್ರಧಾನಿಯಾಗಿದ್ದಾರೆ. 73 ವರ್ಷದ ರನಿಲ್ ಕಾನೂನು ವ್ಯಾಸಂಗ ಮಾಡಿದ್ದ ಅವರು 70ರ ದಶಕದಲ್ಲಿ ರಾಜಕೀಯ ಪ್ರವೇಶಿಸಿ 1977ರಲ್ಲಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದರು. 1993 ರಲ್ಲಿ ಮೊದಲ ಬಾರಿಗೆ ಪ್ರಧಾನಿ ಹುದ್ದೆಗೇರುವ ಮೊದಲು, ಉಪ ವಿದೇಶಾಂಗ ಸಚಿವ, ಯುವಜನ ಮತ್ತು ಉದ್ಯೋಗ ಸಚಿವ ಸೇರಿದಂತೆ ಹಲವಾರು ಇತರ ಸಚಿವ ಸ್ಥಾನವನ್ನು ಅಲಂಕರಿಸಿದ್ದಾರೆ. ಅಲ್ಲದೆ, ಎರಡು ಬಾರಿ ಸಂಸತ್ತಿನ ವಿರೋಧ ಪಕ್ಷದ ನಾಯಕನ ಪಾತ್ರ ನಿರ್ವಹಿಸಿದ್ದಾರೆ. ವಿಕ್ರಮಸಿಂಘೆ ಅವರನ್ನು ಅಕ್ಟೋಬರ್ 2018 ರಲ್ಲಿ ಅಂದಿನ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಪ್ರಧಾನಿ ಹುದ್ದೆಯಿಂದ ವಜಾಗೊಳಿಸಿದ್ದರು.