ಛತ್ತೀಸ್‍ಗಢ: ಹೆಲಿಕಾಪ್ಟರ್ ದುರಂತ; ಇಬ್ಬರು ಪೈಲಟ್‍ಗಳು ಮೃತ್ಯು
ರಾಯಪುರ: ಛತ್ತೀಸ್‍ಗಢದ ರಾಯಪುರ ವಿಮಾನ ನಿಲ್ದಾಣದಲ್ಲಿ ಗುರುವಾರ ಸಂಜೆ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಇಬ್ಬರು ಪೈಲಟ್‍ಗಳು ಮೃತಪಟ್ಟಿದ್ದಾರೆ.
ಕ್ಯಾಪ್ಟನ್ ಗೋಪಾಲ್ ಕೃಷ್ಣ ಪಾಂಡ ಮತ್ತು ಕ್ಯಾಪ್ಟನ್ ಎ.ಪಿ.ಶ್ರೀವಾಸ್ತವ ಘಟನೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಪೈಲಟ್‍ಗಳು ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡುವ ಪ್ರಯತ್ನದಲ್ಲಿದ್ದಾಗ ಬೆಂಕಿ ಹತ್ತಿಕೊಂಡು ಈ ದುರಂಗ ಸಂಭವಿಸಿದ್ದು, ಇಬ್ಬರೂ ಸ್ಥಳದಲ್ಲೇ ಸುಟ್ಟು ಕರಕಲಾದರು. ಆದರೆ ಹೆಲಿಕಾಪ್ಟರ್ ನಲ್ಲಿ ಇತರ ಯಾರೂ ಪ್ರಯಾಣಿಕರು ಇರಲಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ರಾಯಪುರದ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣದಲ್ಲಿ ರಾತ್ರಿ 9.10ರ ಸುಮಾರಿಗೆ ಹಾರಾಟದ ಅಭ್ಯಾಸ ಮಾಡುವ ವೇಳೆ ಈ ಘಟನೆ ನಡೆದಿದೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ಪ್ರಶಾಂತ್ ಅಗರ್‍ವಲ್ ವಿವರ ನೀಡಿದರು.
ದುರಂತದ ಕಾರಣ ತಕ್ಷಣಕ್ಕೆ ತಿಳಿದು ಬಂದಿಲ್ಲ. ನಾಗರಿಕ ವಿಮಾನಯಾನ ಇಲಾಖೆಯ ಮಹಾ ನಿರ್ದೇಶನಾಲಯದ ಪರವಾಗಿ ವಿಸ್ತೃತವಾದ ತಾಂತ್ರಿಕ ತನಿಖೆಗೆ ಆದೇಶಿಸಲಾಗಿದೆ. ದುರಂತಕ್ಕೆ ನಿಖರ ಕಾರಣ ಬಗ್ಗೆ ಛತ್ತೀಸ್‍ಗಢ ಸರ್ಕಾರ ತನಿಖೆಗೆ ಸೂಚಿಸಿದೆ.