10 ವರ್ಷ ಕಳೆದರೂ ಕಲ್ಲಿದ್ದಲು ಹಗರಣ ತನಿಖೆ ಏಕೆ ಪೂರ್ಣಗೊಂಡಿಲ್ಲ ? ಸಿಬಿಐಗೆ ಸುಪ್ರೀಂಕೋರ್ಟ್ ಪ್ರಶ್ನೆ

ಹೊಸದಿಲ್ಲಿ: ಯುಪಿಎ ಆಡಳಿತಾವಧಿಯ ಅಂದರೆ ಹತ್ತು ವರ್ಷ ಹಳೆಯ ಕಲ್ಲಿದ್ದಲು ಹಗರಣ ಮತ್ತು 2017ರಲ್ಲಿ ನ್ಯಾಯಾಲಯ ಆದೇಶಿಸಿದ ಮಣಿಪುರ ಕಾನೂನು ಬಾಹಿರ ಹತ್ಯೆ ಪ್ರಕರಣಗಳ ತನಿಖೆ ಇನ್ನೂ ಏಕೆ ಪೂರ್ಣಗೊಂಡಿಲ್ಲ ಎಂದು ಸುಪ್ರೀಂಕೋರ್ಟ್, ತನಿಖಾ ಸಂಸ್ಥೆಯಾದ ಸಿಬಿಐಯನ್ನು ಪ್ರಶ್ನಿಸಿದೆ.
ಯುಪಿಎ ಆಡಳಿತಾವಧಿಯಲ್ಲಿ ಕಲ್ಲಿದ್ದಲು ಗಣಿ ಹಂಚಿಕೆ ಸಂಬಂಧ ನಡೆದ ಹಗರಣದ ತನಿಖೆ ಆರಂಭವಾಗಿ ಹತ್ತು ವರ್ಷ ಕಳೆದರೂ, ಸಿಬಿಐ ಇನ್ನೂ ತನಿಖೆ ಪೂರ್ಣಗೊಳಿಸಿಲ್ಲ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ವಕೀಲ ಪ್ರಶಾಂತ್ ಭೂಷಣ್ ನ್ಯಾಯಾಲಯದ ಗಮನಕ್ಕೆ ತಂದರು. ಯಾವುದೇ ವಿಧಿವಿಧಾನ ಅನುಸರಿಸದೇ ಖಾಸಗಿ ಕಂಪನಿಗಳಿಗೆ ಕಲ್ಲಿದ್ದಲು ಗಣಿ ಹಂಚಿಕೆ ಮಾಡುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಪ್ರಮಾಣದ ಹಾನಿಯಾಗಿದೆ ಎಂದು ಅರ್ಜಿದಾರರು ವಾದಿಸಿದರು.
ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಮತ್ತು ನ್ಯಾಯಮೂರ್ತಿಗಳಾದ ಜೆ.ಕೆ.ಮಹೇಶ್ವರಿ ಹಾಗೂ ಹಿಮಾ ಕೊಹ್ಲಿ ಅವರನ್ನು ಒಳಗೊಂಡ ನ್ಯಾಯಪೀಠ, ಕಲ್ಲಿದ್ದಲು ಹಗರಣದ ಪ್ರಕರಣಗಳ ತನಿಖೆಯಲ್ಲಿ ತೊಡಗಿರುವ ಸಿಬಿಐ ಅಧಿಕಾರಿಗಳ ಪರ ವಾದಿಸಲು ಯಾರು ಅನುಮತಿ ಕೋರಿದ್ದಾರೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾತಿ ಅವರನ್ನು ಈ ಸಂಬಂಧ ಪ್ರಶ್ನಿಸಿತು. ಜತೆಗೆ ಈ ಸಂಬಂಧ ತನಿಖೆ ಆರಂಭಿಸಿದ ಹತ್ತು ವರ್ಷ ಕಳೆದರೂ ಏಕೆ ತನಿಖೆ ಪೂರ್ಣಗೊಂಡಿಲ್ಲ ಎಂಬ ಬಗ್ಗೆ ಜುಲೈ ತಿಂಗಳ 15ರ ಒಳಗಾಗಿ ಸ್ಥಿತಿಗತಿ ವರದಿ ಸಲ್ಲಿಸುವಂತೆ ಪೀಠ ಆದೇಶ ನೀಡಿತು.
ಮಣಿಪುರದಲ್ಲಿ 2002-2012ರ ನಡುವೆ ನಡೆದ ಕಾನೂನುಬಾಹಿರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಹತ್ತು ವರ್ಷ ಕಳೆದರೂ ತನಿಖೆ ಪೂರ್ಣಗೊಂಡಿಲ್ಲ ಎಂದು ಅರ್ಜಿ ಸಲ್ಲಿಸಿದ ಎನ್‍ಜಿಓ ಪರ ವಕೀಲ ಕೊಲಿನ್ ಗೋನ್ಸಾಲ್ವೇಸ್ ಹೇಳಿದರು. ಆದರೆ ವಾದವನ್ನು ತಿರಸ್ಕರಿಸಿದ ಭಾತಿ, 42 ಪ್ರಕರಣಗಳ ತನಿಖೆಯನ್ನು ಸಿಬಿಐ ಪೂರ್ಣಗೊಳಿಸಿದೆ ಎಂದು ಹೇಳಿದರು.