ಇಬ್ಬರು ಉನ್ನತ ಅಧಿಕಾರಿಗಳನ್ನು ಕೈಬಿಟ್ಟ ಟ್ವಿಟರ್, ಹೊಸ ನೇಮಕಾತಿ ಪ್ರಕ್ರಿಯೆಗಳಿಗೆ ಬ್ರೇಕ್
ಹೊಸದಿಲ್ಲಿ: ಟೆಸ್ಲಾ ಸಿಇಒ ಆಗಿರುವ ಎಲಾನ್ ಮಸ್ಕ್ ಅವರು ಟ್ವಿಟರ್ ನ ನೂತನ ಮಾಲಕರಾಗುವ ಕಾಲ ಸನ್ನಿಹಿತವಾಗುತ್ತಿದ್ದಂತೆಯೇ ಹೆಚ್ಚಿನ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿರುವುದಾಗಿ ಹಾಗೂ ಇಬ್ಬರು ಹಿರಿಯ ಅಧಿಕಾರಿಗಳನ್ನು ಕೈಬಿಡುವುದಾಗಿ ಟ್ವಿಟರ್ ಗುರುವಾರ ಹೇಳಿದೆ.
ಟ್ವಿಟರ್ ನ ಸಂಶೋಧನೆ, ವಿನ್ಯಾಸ ಮತ್ತು ಇಂಜಿನಿಯರಿಂಗ್ ವಿಭಾಗದ ನೇತೃತ್ವ ವಹಿಸಿರುವ ಹಾಗೂ ಜನರಲ್ ಮ್ಯಾನೇಜರ್ ಹುದ್ದೆಯಲ್ಲಿರುವ ಕಯ್ವೋನ್ ಬೇಕ್ಪೋರ್ ಹಾಗೂ ಉತ್ಪನ್ನಗಳ ಮುಖ್ಯಸ್ಥ ಬ್ರೂಸ್ ಫಾಲ್ಕ್ ತಮ್ಮ ಹುದ್ದೆ ತೊರೆಯುತ್ತಿದ್ದಾರೆ ಎಂದು ಟ್ವಿಟರ್ ವಕ್ತಾರರು ಮಾಹಿತಿ ನೀಡಿದ್ದಾರೆ.
ಆದರೆ ಬೇಕ್ಪೋರ್ ಮಾತ್ರ ತಮ್ಮನ್ನು ಹೊರದಬ್ಬಲಾಗಿದೆ ಎಂದು ಹೇಳಿದ್ದಾರೆ. "ನಿಜವೇನೆಂದರೆ ನಾನು ಈ ರೀತಿ ಟ್ವಿಟರ್ ನಿಂದ ನಿರ್ಗಮಿಸುವುದಾಗಿ ಊಹಿಸಿರಲಿಲ್ಲ ಇದು ನನ್ನ ನಿರ್ಧಾರವಾಗಿರಲಿಲ್ಲ.'' ಎಂದು ಬೇಕ್ಪೋರ್ ಹೇಳಿದ್ದಾರೆ.
ತಂಡವನ್ನು ಬೇರೊಂದು ದಿಕ್ಕಿನಲ್ಲಿ ಸಾಗಿಸಬೇಕಾಗಿರುವುದರಿಂದ ಉದ್ಯೋಗ ತೊರೆಯುವಂತೆ ಟ್ವಿಟರ್ ಮುಖ್ಯಸ್ಥ ಪರಾಗ್ ಅಗರ್ವಾಲ್ ಹೇಳಿದರು ಎಂದು ಅವರು ಹೇಳಿದ್ದಾರೆ.
ಅತ್ಯಂತ ಅಗತ್ಯ ಹುದ್ದೆಗಳಿಗೆ ಹೊರತಾಗಿ ಬೇರೆ ಯಾವುದೇ ನೇಮಕಾತಿಗಳನ್ನು ನಿಲ್ಲಿಸುವುದಾಗಿ ಟ್ವಿಟರ್ ದೃಢಪಡಿಸಿದೆ.