ಒಂದು ಕುಟುಂಬ, ಒಂದೇ ಟಿಕೆಟ್ ನಿಯಮ ಜಾರಿಗೆ ಮುಂದಾದ ಕಾಂಗ್ರೆಸ್
ಇಂದಿನಿಂದ ಉದಯಪುರದಲ್ಲಿ ಚಿಂತನ ಶಿಬಿರ

ಉದಯಪುರ: ಲೋಕಸಭೆ, ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣಾ ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ 2024ರ ಲೋಕಸಭಾ ಚುನಾವಣೆಗೆ ಸಜ್ಜಾಗುವ ಹಾಗೂ ಪಕ್ಷವನ್ನು ಮರು ಸಂಘಟಿಸುವ ಕುರಿತು ಚಿಂತನ ಮಂಥನ ನಡೆಸಲು ಶುಕ್ರವಾರದಿಂದ 3 ದಿನಗಳ ಕಾಲ ಚಿಂತನ ಶಿಬಿರ ನಡೆಸಲಿದೆ. ಶಿಬಿರದಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ಮುಖಂಡರು ಉದಯಪುರದತ್ತ ಹೆಜ್ಜೆ ಹಾಕುತ್ತಿದ್ದಾರೆ.
ಪಕ್ಷದ ಹುದ್ದೆಗಳಿಗೆ ವಯಸ್ಸಿನ ಮಿತಿ ಹಾಗೂ "ಒಂದು ಕುಟುಂಬ, ಒಂದೇ ಟಿಕೆಟ್" ನಿಯಮವನ್ನು ಅಂಗೀಕರಿಸುವುದು ರಾಜಸ್ಥಾನದ ಉದಯಪುರದಲ್ಲಿ ಇಂದು ಆರಂಭವಾಗಲಿರುವ ಮೂರು ದಿನಗಳ "ಚಿಂತನ್ ಶಿಬಿರದಲ್ಲಿ ಕಾಂಗ್ರೆಸ್ ಕಾರ್ಯಸೂಚಿಯಲ್ಲಿದೆ.
ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಸುಮಾರು 400 ನಾಯಕರು ಇತ್ತೀಚಿನ ಚುನಾವಣೆಯಲ್ಲಿ ಪಕ್ಷದ ಐದು ರಾಜ್ಯಗಳ ಸೋಲಿನ ನಂತರ ಕರೆದ ಚಿಂತನ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ.
ಚಿಂತನ ಶಿಬಿರದ ನಂತರ ಪಕ್ಷದಲ್ಲಿ ದೊಡ್ಡಮಟ್ಟದಲ್ಲಿ ಸಾಂಸ್ಥಿಕ ಬದಲಾವಣೆಯಾಗಲಿದೆ. ಕನಿಷ್ಟ 5 ವರ್ಷವಾದರೂ ಕೆಲಸ ಮಾಡದ ನಾಯಕರ ಕುಟುಂಬ ಸದಸ್ಯರಿಗೆ, ಸಂಬಂಧಿಕರಿಗೆ ಟಿಕೆಟ್ ನೀಡಬಾರದು ಎಂಬ ಪ್ರಸ್ತಾವದ ಬಗ್ಗೆ ಪಕ್ಷದಲ್ಲಿ ಸಹಮತವಿದೆ ಎಂದು ಹಿರಿಯ ನಾಯಕ ಅಜಯ್ ಮಾಕನ್ ಹೇಳಿದ್ದಾರೆ.
ಒಂದು ಕುಟುಂಬ,ಒಂದೇ ಟಿಕೆಟ್ ನಿಯಮಕ್ಕೆ ಗಾಂಧಿ ಕುಟುಂಬವೂ ಒಳಪಡಲಿದೆಯೇ ಎಂಬ ಪ್ರಶ್ನೆಗೆ ಮಾಕನ್, ಗಾಂಧಿ ಕುಟುಂಬ ಸದಸ್ಯರು ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ. ಪ್ರಿಯಾಂಕಾ ಗಾಂಧಿ ಅವರು 2018ರಿಂದ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.







