ಅಂಡಾರು ಸುತ್ತಮುತ್ತ ಗಾಳಿ-ಮಳೆಗೆ ಅಪಾರ ಹಾನಿ
ಉಡುಪಿ : ಗುರುವಾರ ಜಿಲ್ಲೆಯಾದ್ಯಂತ ಬೀಸಿದ ಗಾಳಿ-ಮಳೆಗೆ ಹೆಬ್ರಿ ತಾಲೂಕು ಅಂಡಾರು ಗ್ರಾಮದ ಆಸುಪಾಸು ವಾಸ್ತವ್ಯದ ಮನೆಗಳು, ತೋಟ, ಅಡಿಕೆ ತೋಟಗಳಿಗೆ ಅಪಾರ ಹಾನಿಯಾಗಿರುವ ಬಗ್ಗೆ ವರದಿಗಳು ಬಂದಿವೆ.
ಅಂಡಾರು ಗ್ರಾಮದ ಬಾಲಚಂದ್ರ ಸೇರ್ವೆಗಾರ್ ಎಂಬವರ ಮನೆಯ ತೋಟ ಹಾಗೂ ಅಡಿಕೆ ತೋಟಗಳಿಗೆ ಗಾಳಿಮಳೆಯಿಂದ ಅಪಾರ ಹಾನಿಯಾ ಗಿದ್ದು 20 ಸಾವಿರ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ. ಅದೇ ರೀತಿ ಕವನ್ ಶೆಟ್ಟಿ ಎಂಬವರ ಅಡಿಕೆ ತೋಟವೂ ಗಾಳಿ-ಮಳೆಯಿಂದ ಭಾಗಶ: ಹಾನಿಯಾಗಿದ್ದು 25,000 ರೂ.ನಷ್ಟದ ಅಂದಾಜು ಮಾಡಲಾಗಿದೆ.
ಅಂಡಾರು ಗ್ರಾಮದವರೇ ಆದ ತನಿಯ ಗೌಡ ಎಂಬವರ ಮನೆ ಹಾಗೂ ಅಡಿಕೆ ತೋಟ, ಅಲ್ಲದೇ ರಾಮಚಂದ್ರ ಶೆಟ್ಟಿ ಎಂಬವರ ಮನೆಯೂ ಗಾಳಿ-ಮಳೆಗೆ ಭಾಗಶ: ಹಾನಿಯಾಗಿದ್ದು ೩೦,೦೦೦ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.
ಇಂದು ಬೆಳಗಿನವರೆಗೆ 24 ಗಂಟೆಗಳ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ ೧೬.೬ ಮಿ.ಮೀ. ಮಳೆಯಾಗಿದೆ. ಬೈಂದೂರಿನಲ್ಲಿ ೩೪.೪ಮಿ.ಮೀ, ಉಡುಪಿಯಲ್ಲಿ ೧೭.೮, ಕುಂದಾಪುರ-೧೪.೬, ಕಾಪು-೧೩.೭, ಬ್ರಹ್ಮಾವರ ೧೨.೨, ಕಾರ್ಕಳ ಹಾಗೂ ಹೆಬ್ರಿ ತಲಾ ೧೧.೨ ಮಿ.ಮೀ. ಮಳೆಯಾದ ಬಗ್ಗೆ ಇಲ್ಲಿಗೆ ಮಾಹಿತಿಗಳು ಬಂದಿವೆ.







