ಮಂಗಳೂರು; ಯುವತಿಗೆ ಮಾದಕ ವಸ್ತು ನೀಡಿ ಅತ್ಯಾಚಾರ, ಸುಲಿಗೆ ಪ್ರಕರಣ: ಆರೋಪಿ ಸೆರೆ

ಶಾನ್ ನವಾಝ್
ಮಂಗಳೂರು : ಮೂಡುಬಿದಿರೆ ಸಮೀಪದ ಯುವತಿಯನ್ನು ಮದುವೆಯಾಗುವ ಅಮಿಷವೊಡ್ಡಿ ಅತ್ಯಾಚಾರ ನಡೆಸಿ ಆಕೆಯಿಂದ ಹಣವನ್ನು ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ತೊಕ್ಕೊಟ್ಟು ಸಮೀಪದ ಹಿದಾಯತ್ ನಗರದ ಶಾನ್ ನವಾಝ್ (36) ಎಂದು ಗುರುತಿಸಲಾಗಿದೆ.
ಮೂಡುಬಿದಿರೆಯ ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿದ ಆರೋಪಿ ಅತ್ಯಾಚಾರ ಎಸಗಿ ಹಣವನ್ನು ಸುಲಿಗೆ ಮಾಡಿದ್ದಲ್ಲದೆ ಆಕೆಗೆ ಮಾದಕ ವಸ್ತುಗಳನ್ನು ಬಲವಂತವಾಗಿ ಸೇವನೆ ಮಾಡಿಸಿ ಆಕೆಯ ನಗ್ನ ಚಿತ್ರಗಳನ್ನು ಮೊಬೈಲ್ನಲ್ಲಿ ಚಿತ್ರೀಕರಣ ಮಾಡಿ ನಂತರ ಹಣವನ್ನು ನೀಡಬೇಕೆಂದು ಬೆದರಿಕೆ ಹಾಕಿ 1.50 ಲಕ್ಷ ರೂ.ಸುಲಿಗೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ವಿವಿಧ ಕಡೆಗಳಲ್ಲಿನ ಲಾಡ್ಜ್ಗಳಿಗೆ ಕರೆದುಕೊಂಡು ಹೋಗಿ ಬಲತ್ಕಾರವಾಗಿ ಅತ್ಯಾಚಾರ ನಡೆಸಿದ್ದ ಎಂದು ಈ ಬಗ್ಗೆ ನೊಂದ ಯುವತಿಯು ನೀಡಿದ ದೂರಿನಂತೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ಮುಂದಿನ ತನಿಖೆಯನ್ನು ಕೈಗೊಳ್ಳುವಂತೆ ಕಡತವನ್ನು ಮಂಗಳೂರು ನಗರ ಅಪರಾಧ ವಿಭಾಗ (ಸಿಸಿಬಿ) ಕ್ಕೆ ವರ್ಗಾಯಿಸಲಾಗಿತ್ತು. ಈ ಪ್ರಕರಣದ ತನಿಖೆಯನ್ನು ಕೈಗೊಂಡ ಸಿಸಿಬಿ ಘಟಕದ ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಹಾಗೂ ಸಿಬ್ಬಂದಿ ವರ್ಗವು ಆರೋಪಿಯನ್ನು ಬಂಧಿಸಿದೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ನೊಂದ ಯುವತಿಯನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಚಿಕಿತ್ಸೆಯನ್ನು ನೀಡಲಾಗುತ್ತಿದೆ.
ಆರೋಪಿಯು ಯುವತಿಯನ್ನು ನಗರದ ವಿವಿಧ ಲಾಡ್ಜ್ಗಳಲ್ಲದೆ ಪುಣೆ, ಮುಂಬೈಯ ಲಾಡ್ಜ್ಗಳಿಗೂ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದನು. 2019 ಮತ್ತು 2020ರಲ್ಲಿ ಮಂಗಳೂರು ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಎರಡು ಮಾದಕ ವಸ್ತು ಮಾರಾಟದ ಪ್ರಕರಣದಲ್ಲಿ ಆರೋಪಿಯು ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.