ಸುರತ್ಕಲ್; ದೊಡ್ಡ ಕೊಪ್ಪಲ, ಗುಡ್ಡೆ ಕೊಪ್ಪಲ ಕಡಲ ಕಿನಾರೆಯಲ್ಲಿ ತೈಲ ತ್ಯಾಜ್ಯ ಪತ್ತೆ: ಸ್ಥಳೀಯರಲ್ಲಿ ಆತಂಕ

ಸುರತ್ಕಲ್ : ಇಲ್ಲಿನ ದೊಡ್ಡ ಕೊಪ್ಪಲ, ಗುಡ್ಡೆ ಕೊಪ್ಪಲ ಪ್ರದೇಶದ ಕಡಲ ಕಿನಾರೆಯಲ್ಲಿ ತೈಲ ತ್ಯಾಜ್ಯ ಪತ್ತೆಯಾಗಿದ್ದು, ಸ್ಥಳೀಯರನ್ನು ತೀವ್ರ ಆತಂಕಕ್ಕೀಡು ಮಾಡಿದೆ.
ಸುರತ್ಕಲ್, ಎನ್‌ಐಟಿಕೆ, ಗುಡ್ಡೆಕೊಪ್ಪಲ, ದೊಡ್ಡಕೊಪ್ಪಲ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಅಲೆಗಳೊಂದಿಗೆ ತೈಲ ತ್ಯಾಜ್ಯ ಸಮುದ್ರ ದಡಕ್ಕೆ ಅಪ್ಪಳಿಸುತ್ತಿವೆ. ಮೊದಲ ದಿನ ಒಂದೆರೆಡು ಕಡೆ ಕಾಣಿಸಿದ್ದ ಈ ತೈಲ ತ್ಯಾಜ್ಯವು ಶುಕ್ರವಾರ ಏಳೆಂಟು ಕಡೆಗಳಲ್ಲಿ ಕಾಣಿಸಿಕೊಂಡಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇದರಿಂದ ಸ್ಥಳೀಯ ಮೀನುಗಾರರು ಮತ್ತು ಗ್ರಾಮಸ್ಥರು ಕಂಗಾಲಾಗಿದ್ದಾರೆ.
ಈ ತೈಲ ತ್ಯಾಜ್ಯವು ಕಳೆದ 3 ವರ್ಷಗಳಿಂದ ಸಮುದ್ರ ಕಿನಾರೆಯಲ್ಲಿ ಕೆಟ್ಟು ನಿಂತಿರುವ ‘ಭಗವತಿ ಪ್ರೇಮ್’ ಎಂಬ ಹಡಗಿನದ್ದು ಎಂದು ಕೆಲವರು ಹೇಳಿಕೊಂಡರೆ, ಇನ್ನು ಕೆಲವರು ಇದು ಎಂಆರ್‌ಪಿಎಲ್ ಸಹಿತ ಸುರತ್ಕಲ್ ಪರಿಸರದ ಬೃಹತ್ ಕಂಪೆನಿಗಳು ಸಮುದ್ರಕ್ಕೆ ಹೊರಚೆಲ್ಲುವ ತೈಲ ತ್ಯಾಜ್ಯವಾಗಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ತೈಲ ತ್ಯಾಜ್ಯ ಸಮುದ್ರದ ಕಿನಾರೆ ಸೇರುವುದು ಇಲ್ಲಿ ಮಾಮೂಲಿಯಾಗಿದೆ. ಆದರೆ ಇದರಿಂದ ಆಗುತ್ತಿರುವ ತೊಂದರೆಗಳು ಎಂಆರ್‌ಪಿಎಲ್, ಎಸ್‌ಇಝೆಡ್‌ನಂತಹ ಸಂಸ್ಥೆಗಳಿಗೆ ಕಾಣದಿರುವುದು ವಿಪರ್ಯಾಸ. ಸ್ಥಳೀಯ ಜನಪ್ರತಿನಿಧಿಗಳೂ ಗ್ರಾಮಸ್ಥರ ನೆರವಿಗೆ ಮುಂದಾಗಿ ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಬಗ್ಗೆ ಚಿಂತಿಸುತ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
*ಎಂಆರ್‌ಪಿಎಲ್, ಎಸ್‌ಇಝೆಡ್ ಸಹಿತ ಬೃಹತ್ ಕೈಗಾರಿಕಾ ಕಂಪೆನಿಗಳು ತ್ಯಾಜ್ಯ ನೀರನ್ನು ಸಮುದ್ರಕ್ಕೆ ಬಿಡುತ್ತಲೇ ಇವೆ. ಇತ್ತೀಚಿನ ಅಸನಿ ಚಂಡಮಾರುತದ ಕಾರಣದಿಂದಾಗಿ ಸಮುದ್ರದ ಅಬ್ಬರ ಜೋರಾಗಿರುವ ಪರಿಣಾಮ ತೈಲ ತ್ಯಾಜ್ಯಗಳು ಸಮುದ್ರದ ದಡಕ್ಕೆ ಅಪ್ಪಲಿಸುವ ಸಾಧ್ಯತೆಗಳಿವೆ. ಅಲ್ಲದೆ ಕೆಟ್ಟು ನಿಂತ ಮತ್ತು ಸಂಚಾರದ ಹಡಗುಗಳೂ ಅದರಲ್ಲಿರುವ ತ್ಯಾಜ್ಯಗಳನ್ನು ಹೊರ ಹಾಕಿರುವ ಪರಿಣಾಮ ಅದು ಸಮುದ್ರದ ಕಿನಾರೆ ಸೇರಿರುವ ಸಾಧ್ಯತೆ ಇದೆ ಎಂದು ಸ್ಥಳೀಯ ನಿವಾಸಿ ಶ್ರೀಕಾಂತ ಗುಡ್ಡಕೊಪ್ಪಲ ತಿಳಿಸಿದ್ದಾರೆ.
*ಈ ತೈಲ ಮಿಶ್ರಿತ ತ್ಯಾಜ್ಯ ನೀರಿನಿಂದ ಆರೋಗ್ಯ ಹದಗೆಡುತ್ತಿದೆ. ಮೀನುಗಾರಿಕೆಗೂ ತೊಂದರೆಯಾಗುತ್ತಿದೆ. ಮೀನುಗಳು ಮರಿ ಇಡುವ ಸಮಯದಲ್ಲೇ ಇಂತಹ ಅವಾಂತರಗಳು ನಡೆಯುತ್ತಿರುವುದರಿಂದ ಮೀನುಗಳ ಸಂತಾನ ಉತ್ಪತ್ತಿ ಕಡಿಮೆಯಾಗುತ್ತವೆ ಎಂದು ಸಿದ್ದೀಕ್ ಗೊಡ್ಡಕೊಪ್ಪಲ ಅಭಿಪ್ರಾಯಪಟ್ಟಿದ್ದಾರೆ.
*ಸಮುದ್ರ ತೀರದ ಜನರು ಇಂತಗ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಕೂಡ ನವ ಮಂಗಳೂರು ಬಂದರು ಪ್ರಾಧಿಕಾರವಾಗಲೀ, ಜನಪ್ರತಿನಿಧಿಗಳಾಗಲೀ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಹಿಡಿಯುವ ಬಗ್ಗೆ ಮನಸ್ಸು ಮಾಡುತ್ತಿಲ್ಲ. ಜಿಲ್ಲಾಡಳಿತವು ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಸ್ಥಳೀಯರಾದ ಧನಂಜಯ ತಿಳಿಸಿದ್ದಾರೆ.
*‘ಭಗವತಿ ಪ್ರೇಮ್’ ಎಂಬ ಕೆಟ್ಟು ನಿಂತ ಹಡಗನ್ನು ಒಡೆದು ಅದರ ಸಲಕರಣೆಗಳನ್ನು ಗುಜರಿಗೆ ಹಾಕುವುದಕ್ಕಾಗಿ 3 ವರ್ಷದ ಹಿಂದೆ ಗುಡ್ಡಕೊಪ್ಪಲ ಬಳಿ ತಂದಿಡಲಾಗಿದೆ. ಆದರೆ ಈವರೆಗೂ ಅದರ ಕೆಲಸ ಆರಂಭಗೊಂಡಿಲ್ಲ. ಅದು ನಿಲ್ಲಿಸಿರುವ ಸಮೀಪದಲ್ಲಿ ಬಂಡೆಕಲ್ಲುಗಳೂ ಇವೆ. ಅಲ್ಲದೆ ಈ ಪ್ರದೇಶವು ಮೀನುಗಳ ಸಂತಾನ ಉತ್ಪತ್ತಿಯ ಕೇಂದ್ರವೂ ಆಗಿದೆ. ಕೆಟ್ಟು ನಿಂತ ಈ ಹಡಗಿನಿಂದಾಗಿ ಜನರಿಗೂ, ಮೀನುಗಾರರಿಗೂ ತೊಂದರೆ ಎದುರಾಗಿದೆ ಎಂದು ಸಿದ್ದೀಕ್ ಗೊಡ್ಡಕೊಪ್ಪಲ ಹೇಳಿದ್ದಾರೆ.
"ತೈಲ ತ್ಯಾಜ್ಯದ ಮೂಲ ಯಾವುದು ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ. ಆದಾಗ್ಯೂ ಎಂಆರ್‌ಎಂಪಿಎಲ್, ಎನ್‌ಎಂಪಿಟಿ ಅಧಿಕಾರಿಗಳಿಂದ ಮಾಹಿತಿ ಕೇಳಿದ್ದೇವೆ. ಅಲ್ಲದೆ ಸ್ಥಳೀಯವಾಗಿಯೂ ಪರಿಶೀಲನೆಗೆ ಕ್ರಮ ವಹಿಸಲಾಗಿದೆ. ಶನಿವಾರ ಈ ಬಗ್ಗೆ ತಾನು ಎಂಆರ್‌ಎಂಪಿಎಲ್, ಎನ್‌ಎಂಪಿಟಿ ಅಧಿಕಾರಿಗಳ ಜೊತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದೇನೆ. ಅಲ್ಲದೆ ಸ್ಥಳೀಯರಿಗೂ. ಮೀನುಗಾರಿಕೆಗೂ ಯಾವುದೇ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು".
- ಡಾ. ರಾಜೇಂದ್ರ ಕೆ.ವಿ.
ದ.ಕ.ಜಿಲ್ಲಾಧಿಕಾರಿ