ಉಡುಪಿ ಶ್ರೀಕೃಷ್ಣಮಠದಲ್ಲಿ ಯಾತ್ರಾರ್ಥಿಗಳ 6.30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

ಉಡುಪಿ, ಮೇ 14: ಉಡುಪಿ ಶ್ರೀಕೃಷ್ಣ ಮಠಕ್ಕೆ ಬಂದಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಯಾತ್ರಾರ್ಥಿಗಳ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವಾಗಿರುವ ಘಟನೆ ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ನಡೆದಿರುವುದು ವರದಿಯಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕನಹಳ್ಳಿ ಅತ್ತಿಬೆಲೆಯ ಷಣ್ಮುಗಂ ತನ್ನ ಸಂಸಾರದೊಂದಿಗೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದರು. ನಂತರ ಕೃಷ್ಣಮಠದ ವಸಂತ ಮಂಟಪದ ಬಳಿ ತೊಟ್ಟಿಲು ಸೇವೆ ನಡೆಯುತ್ತಿದ್ದು, ದೇವರ ಆರತಿಯನ್ನು ಪಡೆಯುವಾಗ ಕಳ್ಳರು, ಷಣ್ಮುಗಂ ಅವರ ಪತ್ನಿಯ ವ್ಯಾನಿಟಿ ಬ್ಯಾಗಿನ ಝಿಪ್ ತೆಗೆದು, ಅದರೊಳಗಿದ್ದ ಚಿನ್ನಾಭರಣ ಹಾಕಿದ್ದ ಬಾಕ್ಸ್‌ನ್ನು ಎಗರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಟ್ಟು 155 ಗ್ರಾಂ ತೂಕದ ಚಿನ್ನಾಭರಣ ಕಳವಾಗಿದ್ದು, ಅವುಗಳ ಒಟ್ಟು ಮೌಲ್ಯ 6,30,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Next Story