ಹಿರಿಯ ರಾಜಕಾರಣಿ ಶರದ್ ಪವಾರ್ ವಿರುದ್ಧ ನಿಂದನಾತ್ಮಕ ಪೋಸ್ಟ್: ಮರಾಠಿ ನಟಿಯ ಬಂಧನ

ಮರಾಠಿ ನಟಿ ಕೇತಕಿ ಚಿತಾಲೆ (Photo: instagram)
ಮುಂಬೈ: ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಕುರಿತು ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ ಹಂಚಿಕೊಂಡಿದ್ದಕ್ಕಾಗಿ ಮರಾಠಿ ನಟಿ ಕೇತಕಿ ಚಿತಾಲೆ ಅವರನ್ನು ಬಂಧಿಸಲಾಗಿದೆ.
ತೀವ್ರ ವಿವಾದ ಸೃಷ್ಟಿಸಿದ ಅವರ ಪೋಸ್ಟ್ ಬಳಿಕ ಚಿತಾಲೆ ವಿರುದ್ಧ ಮಹಾರಾಷ್ಟ್ರದ ಥಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿತ್ತು. ಮರಾಠಿ ನಟಿಯ ಈ ಪೋಸ್ಟ್ಗೆ ಎನ್ಸಿಪಿ ನಾಯಕರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ ಹಾಗೂ ನಟಿಯ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದರು.
ಟಿವಿ ಮತ್ತು ಚಲನಚಿತ್ರ ನಟಿ ಒಂದು ದಿನದ ಹಿಂದೆ ಹಂಚಿಕೊಂಡ ಪೋಸ್ಟ್ ಅನ್ನು ಅವರು ಬರೆದಿಲ್ಲ, ಬದಲಾಗಿ ಬೇರೆಯವರು ಬರೆದಿರುವುದನ್ನು ನಟಿ ಹಂಚಿಕೊಂಡಿರುವುದು ಮಾತ್ರ ಎಂದು ವರದಿಯಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ವಸತಿ ಅಭಿವೃದ್ಧಿ ಸಚಿವ ಜಿತೇಂದ್ರ ಅವ್ಹಾದ್, “ಎನ್ಸಿಪಿಯ ಯುವ ಕಾರ್ಯಕರ್ತರು ಮಹಾರಾಷ್ಟ್ರದ ಕನಿಷ್ಠ 100-200 ಪೊಲೀಸ್ ಠಾಣೆಗಳಲ್ಲಿ ಈ ಪೋಸ್ಟ್ ಸಂಬಂಧಿಸಿದಂತೆ ಪ್ರಕರಣ ದಾಖಲಿಸುತ್ತಾರೆ” ಎಂದು ಹೇಳಿದ್ದರು.
ಮರಾಠಿಯಲ್ಲಿ ಬರೆದಿರುವ ಪೋಸ್ಟ್ನಲ್ಲಿ ಎನ್ಸಿಪಿ ಮುಖ್ಯಸ್ಥರ ಪೂರ್ಣ ಹೆಸರನ್ನು ನೇರವಾಗಿ ಉಲ್ಲೇಖಿಸಿಲ್ಲ. ಆದರೆ ಅದರಲ್ಲಿ 'ಪವಾರ್' ಎಂದು ಪರೋಕ್ಷವಾಗಿ ಅವರ ಉಪನಾಮವನ್ನು ಮತ್ತು ಅವರ 80ರ ಹರೆಯವನ್ನು ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ.
ಕೇತ್ಕಿ ಚಿತಾಲೆ ವಿರುದ್ಧ ಐಪಿಸಿ ಸೆಕ್ಷನ್ 500 (ಮಾನನಷ್ಟ), 501, 505(2) ಮತ್ತು 153ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ನಡುವೆ, ಅವಹೇಳನಕಾರಿ ಪೋಸ್ಟ್ ಸಂಬಂಧಿಸಿದಂತೆ ಚಿತಾಲೆ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಎನ್ಸಿಪಿಯ ಪುಣೆ ನಗರ ಘಟಕದ ಅಧ್ಯಕ್ಷ ಪ್ರಶಾಂತ್ ಜಗತಾಪ್ ಪೊಲೀಸರಿಗೆ ಪತ್ರ ಬರೆದ್ದಾರೆ.
“ಚಿತಾಲೆ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ಅವಹೇಳನಕಾರಿಯಾಗಿದೆ. ಅವರು ಈ ಪೋಸ್ಟ್ ಮೂಲಕ ಪವಾರ್ ಮತ್ತು ಅವರ ಪುತ್ರಿ ಸುಪ್ರಿಯಾ ಸುಳೆ ಅವರ ಚಿತ್ರಣವನ್ನು ಕೆಡಿಸಲು ಪ್ರಯತ್ನಿಸಿದ್ದಾರೆ. ಈ ಪೋಸ್ಟ್ ಶಾಂತಿ ಕದಡುವ ಸಾಧ್ಯತೆಯಿದೆ ಮತ್ತು ಅದಕ್ಕಾಗಿಯೇ ನಾವು ನಟಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೈಬರ್ ಪೊಲೀಸರಿಗೆ ಪತ್ರವನ್ನು ನೀಡಿದ್ದೇವೆ” ಎಂದು ಜಗತಾಪ್ ತಿಳಿಸಿದ್ದಾರೆ.
ನಟಿಯ ವಿರುದ್ಧ ವಾಗ್ದಾಳಿ ನಡೆಸಿದ ಎನ್ಸಿಪಿ ವಕ್ತಾರ ಕ್ಲೈಡ್ ಕ್ರೆಸ್ಟೊ, ಪವಾರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವುದು ಅಗ್ಗದ ಮತ್ತು ಉಚಿತ ಜನಪ್ರಿಯತೆ ಪಡೆಯಲು ಉತ್ತಮ ಮಾರ್ಗ ಎಂದು ಬಿಜೆಪಿಯ ಮಹಾರಾಷ್ಟ್ರ ಘಟಕದ ನಾಯಕರಿಂದ ಕಲಿತಿದ್ದಾರೆ ಎಂದು ಹೇಳಿದ್ದಾರೆ.
ಈ ಟೀಕೆ ಖಂಡನೀಯ ಎಂದು ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್ ನಾಗ್ಪುರದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಎನ್ಸಿಪಿಯ ಮಹಾರಾಷ್ಟ್ರ ಮಹಿಳಾ ವಿಭಾಗದ ಮುಖ್ಯಸ್ಥೆ ವಿದ್ಯಾ ಚವಾಣ್ ಮಾತನಾಡಿ, ಪವಾರ್ ಬಗ್ಗೆ ಇಂತಹ ಹೇಳಿಕೆಗಳನ್ನು ನೀಡುವುದಕ್ಕೆ ಆರ್ಎಸ್ಎಸ್ ಅನ್ನು ದೂಷಿಸಿದ್ದಾರೆ.







