ಪುಟ್ಟಸ್ವಾಮಿ ಪಟ್ಟಾಭಿಷೇಕ ನಡೆದರೆ ನ್ಯಾಯಾಂಗ ನಿಂದನೆ: ಎಚ್ಚರಿಕೆ
ಬೆಂಗಳೂರು, ಮೇ 14: ಗಾಣಿಗ ಸಂಸ್ಥಾನ ಮಠದ ಪೀಠಾಧಿಪತಿಗಳಾಗುತ್ತಿರುವ ಬಿ.ಜಿ.ಪುಟ್ಟಸ್ವಾಮಿ ಅವರಿಗೆ ತಾತ್ಕಾಲಿಕವಾಗಿ ನ್ಯಾಯಾಲಯವು ತಡೆ ನೀಡಿದ್ದು, ಮೇ 15ರಂದು ನಡೆಯುವ ಪಟ್ಟಾಭಿಷೇಕ ನಿಲ್ಲಿಸದಿದ್ದರೆ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಮೈಸೂರು ಜಿಲ್ಲಾ ಜ್ಯೋತಿಪಣ ಗಾಣಿಗರ ಸಂಘದ ಅಧ್ಯಕ್ಷ ಇಂಟಕ್ ರಾಜು. ಎನ್. ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ಬಿಜೆಪಿ ಮುಖಂಡ ಬಿ.ಜೆ ಪುಟ್ಟಸ್ವಾಮಿ ಸ್ವಾರ್ಥದ ಹಿತದೃಷ್ಟಿಯಿಂದ ಪೀಠಾಧಿಪತಿಗಳಾಗುತ್ತಿದ್ದಾರೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಗಾಣಿಗ ಸಮುದಾಯಕ್ಕೆ ಎಂಟು ಎಕರೆ ಜಮೀನು ಮತ್ತು ಸಮುದಾಯದ ಅಭಿವೃದ್ಧಿಗಾಗಿ ಐದು ಕೋಟಿ ಹಣವನ್ನು ಬಿಡುಗಡೆ ಮಾಡಿದ್ದರು. ಈ ಸಂದರ್ಭದಲ್ಲಿ ಯಾರಿಗೂ ಗೊತ್ತಾಗದ ಹಾಗೆ ಬಿ.ಜೆ. ಪುಟ್ಟಸ್ವಾಮಿ ತಮ್ಮ ಆಪ್ತ ಬಳಗದೊಂದಿಗೆ ಗಾಣಿಗ ಸಮುದಾಯ ಟ್ರಸ್ಟ್ ಅನ್ನು ರಿಜಿಸ್ಟರ್ ಮಾಡಿಸಿ ಅದರಡಿಯಲ್ಲಿ ಭೂಮಿ ಮತ್ತು ಅನುದಾನ ಒಳಪಡುವಂತೆ ಮಾಡಿ ದ್ರೋಹವೆಸಗಿದ್ದಾರೆ ಎಂದರು.
ಶೈಕ್ಷಣಿಕ ಉದ್ದೇಶಕ್ಕಾಗಿ ಸರಕಾರ ನೀಡಿದ ಹಣವನ್ನು ಮಠ ದೇವಸ್ಥಾನ ಹೀಗೆ ಅನ್ಯ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ. ಈ ಹಿಂದೆ ಮಠ ನಿರ್ಮಾಣಕ್ಕೂ ಮುಂಚೆಯೇ ಇಬ್ಬರನ್ನು ಅನಧಿಕೃತವಾಗಿ ಮಠಾಧಿಪತಿಗಳನ್ನಾಗಿ ಮಾಡಿ ಅವರನ್ನು ಕೈಬಿಟ್ಟು ಈಗ ಇವರೇ ಪೀಠಾರೋಹಣ ಮಾಡಲು ಹೊರಟಿದ್ದಾರೆ ಎಂದು ಅವರು ಕಿಡಿಕಾರಿದರು.
ನ್ಯಾಯಾಲಯದ ಆದೇಶದಂತೆ ಕೂಡಲೇ ಕಾರ್ಯಕ್ರಮವನ್ನು ನಿಲ್ಲಿಸಬೇಕು. ನ್ಯಾಯಾಲಯದಿಂದ ಪೂರ್ಣಪ್ರಮಾಣದ ತೀರ್ಪು ಬಂದ ನಂತರ ತೀರ್ಪಿಗೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಹೇಮಾವತಿ, ರಂಗಸ್ವಾಮಿ, ಶಿವಕುಮಾರ್, ಧನಶೇಖರ್, ಮಹೇಶ್ ಉಪಸ್ಥಿತರಿದ್ದರು.







